"ದೇವರು ನಮಗೆ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲವನ್ನೂ ಕೊಟ್ಟು ಕಳಿಸಿದ್ದಾನೆ. ಅವನ ಹತ್ತಿರ ಕೇಳುವುದಕ್ಕೆ ಇನ್ನೇನು ಉಳಿದಿದೆ ನಮಗೆ?" ಇದೇನಪ್ಪ ಈತರ ಹೇಳ್ತಾರೆ ಕಾದಂಬರಿಯಲ್ಲಿ ಅಂತ ಮೊದಲ ಬಾರಿಗೆ ಈ ಕಾದಂಬರಿ ಓದಿದಾಗ ಇಂತಹ ಅನೇಕ ಮಾತುಗಳು ಮನಕ್ಕೆ ನಾಟಿದ್ದವು. ವೈಚಾರಿಕ ಪ್ರಜ್ಞೆ ಅನ್ನುವಂತದ್ದು ಒಂದು ಪ್ರಕಾರ ಇದೆ ಅಂತ ಇನ್ನೂ ತಿಳಿದೆ ಇರುವ ವಯಸ್ಸು ಅದು. ನಮ್ಮ ಗುರುಗಳ ಹತ್ರ ಇದರ ಬಗ್ಗೆ ಚರ್ಚೆ ಮಾಡಲು ಹವನಿಸಿದ್ದೆ, ಆಗ ಅವರು ಹೇಳಿದ್ರು "ಈ ಕಾದಂಬರಿ ಅರ್ಥ ಮಾಡ್ಕೋಳಾಕ ಒಂತರಾ ಪಕ್ವತೆ ಬೇಕು, ಇವಾಗ ನಿನಗ ಏನ ಅರ್ಥ ಆಗೇತಲಾ ಅಷ್ಟ ಸಾಕು, ಮುಂದ ಕಾಲಕಾಲಕ್ಕ ಓದ್ಕೋತ ಹೋಗು ಬ್ಯಾರೆನ ಅರ್ಥ ಆಗ್ತದ" ಅಂದಿದ್ರು. ನಂತರ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಓದಿದ್ದೆ ಮೊದಲಿನ ಓದಿಗೆ ದಕ್ಕದ ಅನೇಕ ಸಂಗತಿಗಳು ದಕ್ಕಿದದವು. ಇವತ್ತು ಈ ಚಲನಚಿತ್ರ ನೋಡಿದೆ ಅದಕ್ಕಿಂತ ದುಪ್ಪಟ್ಟು ಸಿಕ್ಕ ಅನುಭವ, ಇನ್ನು ಇನ್ನೊಂದು ಸಾರಿ ಓದಿದರೆ? ಅನ್ನುವ ಕುತೂಹಲ ಮಡುಗಟ್ಟಿ ನಿಂತಿದೆ. ಶಿವರಾಮ ಕಾರಂತರ ಕಾದಂಬರಿಗಳೇ ಹಾಗೆ, ಬದುಕಿನ ತರ ಪಕ್ವವಾದಷ್ಟು ರುಚಿ ಜಾಸ್ತಿ.
ನಮ್ಮ ಬದುಕಿನ ಸಿದ್ದ ಸೂತ್ರಗಳಾದ "ಆಸೆ ಆಕಾಂಕ್ಷೆ" ಮತ್ತು ಅದರ ಸುತ್ತ ಗಿರಕಿ ಹೊಡೆಯುವ ಬದುಕು, ಅದರಾಚೆಗೆ ವೈರಾಗ್ಯ ಇನ್ನು ಏನೇನೋ ಕಲ್ಪಿಸಿಕೊಂಡು ಬದುಕುತ್ತಿದದವರಿಗೆ ಮೂಕಜ್ಜಿಯ ಮಾತು ನಮ್ಮ ಅಪಕ್ವ ನಂಬಿಕೆಗಳನ್ನೇ ಬುಡಮೇಲು ಮಾಡುತ್ತದೆ. "ಬದುಕೆಂದರೆ ಬರೀ ಆಸೆಗಳನ್ನು ಗೆಲ್ಲೋದಾ? ಗೆಲ್ಲೋಕೆ ಅದೇನು ಪಂದ್ಯವಾ?" ಅಂತಾಳೆ ಮುಕಜ್ಜಿ.
ನಾವು, ನಮ್ಮವರು ಅಥವಾ ಬೇರೆಯವರು ನಮ್ಮ-ನಮ್ಮ ಅಪಕ್ವ ನಂಬಿಕೆಗಳನ್ನು ನಾವು ಆಚರಿಸದೇ ಹೆಚ್ಚಿನ ಮಟ್ಟದಲ್ಲಿ ಬೇರೆಯವರ ಮೇಲೆ ಹೊರಿಸಿದ್ದೆ ಹೆಚ್ಚು, ಇದನ್ನು ತಿಳ್ಕೊಳಕ್ಕೆ ಇತಿಹಾಸ, ತತ್ವಶಾಸ್ತ್ರ ಓದಲೇ ಬೇಕು ಅಂತೇನಿಲ್ಲ ಮೂಕಜ್ಜಿಯ ತರಹ ಸುಮ್ಮನೆ ಕೂತು ನಮ್ಮ ಮೆದುಳನ್ನು ಯಾರಿಗೂ ಅಡ ಇಡದೇ ಯೋಚನೆ ಮಾಡಿದರೆ ಸಾಕು. ಹೀಗೆ ನಾವು ಯೋಚಿಸದೇ ಹೋದ ಅನೇಕ ಸಂಗತಿಗಳು ಮತ್ತು ಅದರಿಂದ ನಾವು ಪಟ್ಟ ಯಾತನೆ ಕಾರಂತರು ಮೂಕಜ್ಜಿಯ ಮೂಲಕ ಹೇಳಿಸಿದ್ದಾರೆ. ಅದನ್ನು ಪಿ.ಶೇಷಾದ್ರಿ ಅವರು ಮೂಕಜ್ಜಿ ಸುಬ್ರಾಯನಿಗೆ ಹೇಳುವದಕ್ಕಿಂತ ಆಪ್ತವಾಗಿ ಈ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಇದರಲ್ಲಿ ವ್ಯತಿರಿಕ್ತ ಪಾತ್ರಗಳಾಗಿ ಬರುವ ಎರಡು ಪಾತ್ರಗಳು ಅಂದರೆ ನಾಗಿ ಮತ್ತು ಅನಂತಯ್ಯ. ತನ್ನ ಆಕಾಂಕ್ಷೆ ತೀರಿಸಿಕೊಳ್ಳಲು ವ್ಯವಸ್ಥೆಯನ್ನು ಮೀರಿ ನಡೆದವಳು ನಾಗಿ, ನಂತರ ಅದರಲ್ಲೂ ಮೋಸವಾದಾಗ ಸ್ವಾಭಿಮಾನಿಯಾಗಿ ಬದುಕುವ ಈಕೆ ಮೂಕಜ್ಜಿಯ ದೃಷ್ಟಿಯಲ್ಲಿ ಗಟ್ಟಿಯಾದ ವ್ಯಕ್ತಿತ್ವ, ಆದರೆ ಅನಂತಯ್ಯ ಬೂಟಾಟಿಕೆಯ ಬದುಕು, ಜನ್ನನ ಕಚ್ಚೆ ಹರುಕುತನ ಪ್ರವೃತ್ತಿ ಬಯಲಿಗೆಳೆದು ಬಯಲಲ್ಲಿ ಬೆತ್ತಲು ಮಾಡುತ್ತಾಳೆ. ಈ ವಿಷಯದಲ್ಲಂತೂ ಒಂದೀಟು ಅಶ್ಲೀಲತೆಯ ಸೊಂಕು ತಟ್ಟದಂತೆ ನಿರ್ವಹಿಸಿದಕ್ಕೆ ನಿರ್ದೇಶಕರಿಗೆ ಅನೇಕ ಮೆಚ್ಚುಗೆ.
ಬಿ.ಜಯಶ್ರೀ ಅವರ ಪಾತ್ರ ಅದ್ಬುತ, ಮಲೆನಾಡಿನ ಸುಂದರ ಮಾತಾವರಣ ಮನಕ್ಕೆ ತಂಪು, ಗೋಡ್ಕಿಂಡಿ ಅವರ ಸಂಗೀತ, ಕುಂದಾಪುರ ಕನ್ನಡದ ಶ್ರೀಮಂತ ಭಾಷೆ ಇವೆಲ್ಲ ಕಳಶವಿಟ್ಟು ಮೆರಗು ನೀಡಿವೆ.
ಇಲ್ಲಿ ಮೊಮ್ಮಗನ ಪ್ರಶ್ನೆಗಳನ್ನು ಇಂದಿನ ಪೀಳಿಗೆ ಅನೇಕಬಾರಿ ಕೇಳಿಕೊಳ್ಳಬಹುದು ಆದರೆ ಆ ಮೂಕಜ್ಜಿಯ ಉತ್ತರ ದಕ್ಕಿಸಿಕೊಳ್ಳಬೇಕಾದ ವಿಶಾಲವಾದ ಮನೋಸ್ಥಿತಿ ನಮಗೆ ಇದೆಯಾ? ಈ ಸಿನೆಮಾ ನೋಡಿದ ಮೇಲೆ ತುಂಬಾ ಕೊರೆಯುವ ಪ್ರಶ್ನೆ. ಅದಕ್ಕೆ ಮೂಕಜ್ಜಿಯ ಉತ್ತರ ಈ ಕಾದಂಬರಿಯಲ್ಲಿ ಇದೆ. "ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜೊತೆ ಒಳ್ಳೆಯ ರೀತಿಯಿಂದ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ?"
ಸಾಧ್ಯ ಆದವರು ಈ ಸಿನಿಮಾ ನೋಡಿ, ಈ ಕಾದಂಬರಿ ಓದಿ. ಇಲ್ಲ ಅಂದರೆ ತುಂಬಾ ಮಿಸ್ ಮಾಡ್ಕೋತಿರಿ