Saturday, October 12, 2019

ಛೇದ

ಸಾಹಿತ್ಯ ಪ್ರಿಯರಲ್ಲಿ ಯಶವಂತ ಚಿತ್ತಾಲರ ಬಗ್ಗೆ ಒಂದು ಮಾತಿದೆ ಓದುಗನಿಗೆ ನಿರಾಸೆ ಮಾಡದೇ ಬರೆದ ಲೇಖಕ ಎಂದು. ನಿಜ ಅವರ ಕಥೆ/ಕಾದಂಬರಿಗಳೆಂದರೆ ಹೊಸದೊಂದು ಲೋಕಕ್ಕೆ ಪ್ರವೇಶ ದೊರೆತಂತೆ. ಅವರ ಕಥೆಗಳಲ್ಲಿ ನಮ್ಮನಿಮ್ಮಂತೆ ಪಾತ್ರಗಳಿದ್ದರೂ ಅದನ್ನು ಓದುವಾಗ ಅಪರಿಚಿತವಾದ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಒಬ್ಬ ಬರಹಗಾರ ತನ್ನ ಕೃತಿಗಳ ಮೂಲಕ ಯಶಸ್ವಿಯಾಬೇಕಾದರೆ ಓದುಗನಿಗೆ ಹೊಸತನವನ್ನು ಕೊಡಬೇಕು. ಕ್ಲೀಷೆ ಎನ್ನುವುದು ಓದುಗರನ್ನು ಬಹು ಬೇಗ ಬೊರುಹೊಡೆಸುವಂತದ್ದು. ಓದುಗನ ಉದ್ದೇಶವೇ ಆ ಓದಿನಿಂದ ಏನನ್ನಾದರು ಹೊಸದು ತಿಳಿದುಕೊಳ್ಳಬೇಕೆಂಬ ಬಯಕೆ. ಇದೊಂದು ಮಾತ್ರ ಓದುಗನಿಗೆ ಲಾಭ. ಆದರೆ ಇದನ್ನು ಓದುಗರಿಗೆ ನೀಡಬೇಕಾದರೆ ಲೇಖಕ ಹೊಸದ್ದೇನಾದರೂ ತಿಳಿದಿರಬೇಕು, ಹೇಳುವುದರಲ್ಲಿ ಹೊಸತನವಿರಬೇಕು. ಅಂತಹ ಹೊಸತನ, ತಾಜಾತನ ಚಿತ್ತಾಲರ ಬರಹಗಳಲ್ಲಿದೆ. 

ಅವರ ಪ್ರಸಿದ್ದ ಕಾದಂಬರಿಯಾದ ಛೇದ ಕೂಡ ಚಿತ್ತಾಲರ ವೈಶಿಷ್ಟ್ಯದಿಂದ ಕೂಡಿದೆ. ನಾವು ತಿಳಿದೋ/ತಿಳಿಯದೆಯೋ ಉಂಟಾಗುವ ಭಯದಿಂದ ಉಂಟಾದ ಸಂಶಯ ಸಂಬಂಧಗಳನ್ನು ಹೇಗೆ ಕೊಂದಪ ಹಾಕುತ್ತದೆ. ಭಯ, ಸಂಶಯ, ಸಿಟ್ಟು ಇವುಗಳನ್ನು ಒಬ್ಬ ವ್ಯಕ್ತಿಯ ಮೇಲೆ ಜೀವನದುದ್ದಕ್ಕೂ ತೋರಿಸುವುದು ಅಸಾಧ್ಯ ಎನ್ನುವುದನ್ನು ತಿಳಿದುಕೊಳ್ಳುವ ಹೊತ್ತಿನಲ್ಲಿ ಜೀವನವೇ ಮುಗಿದು ಬಿಡುತ್ತದೆ. ಹೀಗಾಗಿ ನಾವು ಒಡೆದ ಮನಸ್ಸುಗಳಿಂದ ಜೀವಿಸುತ್ತಿದ್ದೇವೆ. ಸಮಾಜದಲ್ಲಿ ಕ್ರೌರ್ಯ ಅನ್ನುವುದು ಮಿತಿಮೀರಿ ಮನುಷ್ಯ ಮನುಷ್ಯರು ಮುಖ ನೋಡಿ ಮಾತಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಬ್ಬನನ್ನು ಕೊಲ್ಲುವುದು ಯಾಕೆ ತಪ್ಪು? ಎಂಬ ಪ್ರಶ್ನೆಗೆ ಅದು ಕಾಯದೆಗೆ ವಿರುದ್ದವಾದದ್ದು, ಪೋಲೀಸರು ಹಿಡಿಯುತ್ತಾರೆ ಎಂದು ಉತ್ತರ ಕೊಡಬೇಕಾಗುವಂಥ ಹಾಸ್ಯಾಸ್ಪದ ಸ್ಥಿತಿಗೆ ಬಂದಿದ್ದೇವೆ ಅಲ್ಲವೆ? ಎಲ್ಲಿಯವರೆಗೆ ನಾವು ವಾಸ್ತವವನ್ನು ವಾಸ್ತವವಾಗಿಯೆ ಗ್ರಹಿಸುತ್ತೇವೋ ಅಲ್ಲಿಯವರೆಗೆ ನಾವು ಅದನ್ನು ಸುಲಭವಾಗಿ ಎದುರಿಸಬಲ್ಲೆವು. ಅಂಥ ಶಕ್ತಿ ಮನುಷ್ಯನಿಗೆ ಇದೆ. ಎಲ್ಲ ಪ್ರಾಣಿಗಳ ಹಾಗೆಯೇ ಅವನಿಗೆ ಅದು ನಿಸರ್ಗದತ್ತವಾದದ್ದು. ಎಂಬುದನ್ನು ವಿವರಿಸುತ್ತಾ ಮರೆಯಲ್ಲಿ ನಡೆಯುವ ಕ್ರೌರ್ಯಗಳಿಂದ "ಕೋಯಿ ಬಚಾವ್" ಎಂಬ ಕೂಗು ಕಾದಂಬರಿ ಮೂಲಕ ಪ್ರತಿದ್ವನಿಸುತ್ತದೆ. ಈ ಕಾದಂಬರಿ 1985ರಲ್ಲಿ ಬರೆದಿದ್ದರೂ ಇಂದಿಗೂ ಪ್ರಸ್ಥುತ ಎನ್ನುವಂತೆ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ.
ಚಿತ್ತಾಲರು ತಮ್ಮ ಬರವಣಿಗೆಯ ಬಗ್ಗೆ ಅವರೇ ಹೇಳುವಂತೆ “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ನಾನು ನಾನಾಗಿಯೇ ಉಳಿದು ಉಳಿದವರಿಂದ ಬರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ”. ಈ ಮಾತು ಕಾದಂಬರಿ ಮುಗಿದ ಮೇಲೆ ನೆನಪಿಗೆ ಬರದೇ ಇರಲ್ಲ. ಅಸಲಿಗೆ ಸಾಹಿತಿ/ಸಾಹಿತ್ಯ ಅಂದ್ರೆ ಇದೇ ಅಲ್ವ!?

No comments:

Post a Comment