Saturday, October 12, 2019

ಕುಡ್ಪಲ್ ಭೂತ

ಭೂತ ಎನ್ನುವ ಕಲ್ಪನೆ ಅವಿಭಜಿತ ದಕ್ಷಿಣ ಕನ್ನಡ (ತುಳುನಾಡು) ಜನರಿಗೆ ಇರುವಷ್ಟು ಪರಿಚಯ ಬೇರೆ ಕಡೆಗೆ ಸಿಗಲಿಕ್ಕೆ ಅಸಾದ್ಯ. ಬೇರೆ ಕಡೆಗಳಲ್ಲಿ ಭೂತ ಎಂದರೆ ಅದೊಂದು ದುಷ್ಟ ಶಕ್ತಿ ಎನ್ನುವ ಸಿದ್ದಕಲ್ಪನೆ ಇದೆ. ಆದರೆ ಇಲ್ಲಿ ಅದು ಅವರು ಆರಾಧಿಸುವ ದೈವವಾಗಿಯೂ, ಅವರನ್ನು ಕಾಪಾಡುತ್ತಿರುವ ಕ್ಷೇತ್ರಪಾಲಕನಾಗಿಯೂ, ಕೆಲವೊಮ್ಮೆ ದುಷ್ಟ ಶಕ್ತಿಯಾಗಿಯೂ ಕಾಣುತ್ತಾರೆ. ಆದರೆ ಅದರಲ್ಲಿ ಬೇರೆ-ಬೇರೆ ವಿಧಗಳುಂಟು. ಕೆಲವೊಂದು ಭೂತಗಳನ್ನು ಮಾತ್ರ ದೈವಗಳೆಂದು ಪರಿಗಣಿಸಿ ಅದಕ್ಕೆ ಗುಡಿ ಕಟ್ಟಿ ಆರಾಧಿಸುವ ಒಂದು ವಿಶಿಷ್ಟವಾದ ಸಂಸ್ಕೃತಿ ಇಲ್ಲಿ ಬೆಳೆದು ಬಂದಿದೆ (ಇದನ್ನು ಕೋಲ ಅಂತ ಕರೀತಾರೆ) ಇದರ ಬಗ್ಗೆ ಅನೇಕ ಸಂಶೋದನೆಗಳೂ ನಡೆದಿವೆ. ತುಳುನಾಡ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಭೂತಗಳ (ದೈವಗಳ) ಪಾತ್ರ ಹಿರಿದು. ಹಾಗಾಗಿ ಇಲ್ಲಿನ ಜನರು ಎಲ್ಲ ಭೂತಗಳಿಗೆ ಹೆದರುವುದಿಲ್ಲ. ಆದರೆ ಈ ಕಾದಂಬರಿಯಲ್ಲಿ ಉಲ್ಲೇಖವಾದ "ಕುಡ್ಪಲ್ ಭೂತ" ಇದು ತುಳುನಾಡಲ್ಲಿ ಆರಾಧಿಸುವ ದೈವವಲ್ಲ (ಭೂತ). ಇದೊಂದು ಹೆಣ್ಣು ಭೂತ. ಇದು ಹಿಂದಿನಿಂದಲೂ ನಂಬಿಕೊಂಡು ಬಂದ ಭೂತವಾದರೂ ಇದಕ್ಕೆ ಅಷ್ಟೇನೂ ಮಹತ್ವ ಕೊಟ್ಟಿಲ್ಲ. ಹಿಂದಿನ ಕಾಲದಲ್ಲಿ ಸತಿ ಹೋಗುತ್ತಿದ್ದ ಪತಿವ್ರತೆಯರು ಮೋಕ್ಷ ಸಿಗದೆ ಅತಂತ್ರರಾಗಿ ಭೂತ ವಾಗ್ತಾರೆ ಅದೇ ಕುಡ್ಪಲ್ ಭೂತ. ಆದರೆ ಮೋಕ್ಷ ಸಿಕ್ಕ ಸತಿಗಳು ಮಹಾಸತಿ, ಮಾಸ್ತಿಯಾಗಿ ಆರಾಧನೆ ಮಾಡುವ ದೈವಗಳಾಗುತ್ತವೆ (ಭೂತ) ಎಂಬ ನಂಬಿಕೆ. ಈ ಕುಡ್ಪಲ್ ಭೂತವನ್ನು ಉಲ್ಲೇಖವಾಗಿ ಇಟ್ಟುಕೊಂಡು ಕಾದಂಬರಿಯನ್ನು ಅನುಬೆಳ್ಳೆಯವರು (Raghavendra Rao Anu Belle) ರಚಿಸಿದ್ದಾರೆ. 

"ಕುಡ್ಪಲ್ ಭೂತ" ಇದೊಂದು ಪತ್ತೆದಾರಿ ಶೈಲಿಯ ಕಾದಂಬರಿ. ದಕ್ಷಿಣ ಕನ್ನಡ-ಉಡುಪಿ ಸುತ್ತಮುತ್ತ ಸುಮಾರು ನಲವತ್ತು ಐವತ್ತು ವರ್ಷಗಳ ಹಿಂದೆ ಇದ್ದಿರಬಹುದಾದಂತಹ ಒಂದು ಹಳ್ಳಿಯ ಚಿತ್ರಣ. ಕುಗ್ರಾಮವಾದರೂ ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಜನರ ಮುಗ್ದತನ, ಎಲ್ಲರೂ ಒಂದೇ ಮನೆಯವರೆನ್ನು ಆಪ್ತತೆ ಒಟ್ಟಿನಲ್ಲಿ ಈ ಆದುನಿಕ, ಐಶಾರಾಮಿ ಸಾಧನಗಳು ಬರುವುದಕ್ಕಿಂತ ಮೊದಲು ಹಳ್ಳಿಯ ಚಿತ್ರಣ ಹೇಗಿತ್ತು ಎಂದಾಗ ನಮ್ಮ ಕಲ್ಪನೆಗೆ ಬರತ್ತೊ ಹಾಗೆ ಇರುವ ಹಳ್ಳಿ. ಒಂದೊಮ್ಮೆ ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಮಂಗಳೂರು ಶೈಲಿಯ ಭಾಷಾ ಹದದಿಂದ ಕೂಡಿದ್ದು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ.
ಗಮನಿಸಬೇಕಾದ ಒಂದು ವಿಷಯವೆಂದರೆ ಕೆಲವೊಮ್ಮೆ ಕಾದಂಬರಿಯ ರಹಸ್ಯ ಲೇಖಕರೇ ಸಾಗುವ ದಾರಿಯಲ್ಲೇ ಬಿಟ್ಟುಕೊಡುತ್ತಾರೆ ಆದರೂ ಕುತೂಹಲವನ್ನು ತಣ್ಣಗೆ ಮಾಡದೇ ಮುಂದೆ ಕರೆದುಕೊಂಡು ಹೋಗುತ್ತದೆ.

ಒಟ್ಟಿನಲ್ಲಿ ಈ ಕಾದಂಬರಿಯ ಚಿತ್ರಣ. ಸಾಮಾನ್ಯವಾಗಿ ಹೆಚ್ಚಿನ ಜನರು ಸಾಮಾಜಿಕವಾಗಿ, ವಯಕ್ತಿಕವಾಗಿ ನಂಬಿಕೊಂಡು ಬಂದ "ಭೂತ" ಎನ್ನುವ ನಂಬಿಕೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅದು ಕೆಲವೊಮ್ಮೆ ಲಾಭದ ಉದ್ದೇಶವಿರಬಹುದು. ಬೇರೆ ಏನೂ ಮಾಡಲು ಅಸಹಾಯಕನಾಗಿ ಈ ಕೃತ್ಯ ಮಾಡಿರಬಹುದು, ಕೆಲವೊಮ್ಮೆ ಜನರನ್ನು ಹೆದರಿಸಲು, ಕಳ್ಳತನ ಮಾಡಲು ಹೀಗೆ ಅನೇಕ ಕಾರಣಗಳಿಂದ ಭೂತ ಎನ್ನು ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಈ ಕಾದಂಬರಿ ಸಾಗುತ್ತಾ ಹೋಗುತ್ತದೆ.
ಕೆಲವೊಂದು ಕಡೆ ಕಾದಂಬರಿ ಬೋರು ಹೊಡೆಯುತ್ತಾದರೂ ನಂತರದ ಕಾದಂಬರಿಯ ವೈಶಿಷ್ಟ್ಯದ ತಿರುವು, ರಂಜನೆ, ತಿಳಿ ಹಾಸ್ಯ, ರಾಜಕೀಯ ವ್ಯಂಗ್ಯ, ಕೊನೆಯವರೆಗೂ ಗಟ್ಟಿತನದಿಂದ ಸಾಗಿದ ಕಾದಂಬರಿಯ ಶೈಲಿ, ಸಮೃದ್ದವಾದ ಭಾಷೆ ಕಾದಂಬರಿಯನ್ನು ಇಷ್ಟಪಡುವ ಹಾಗೆ ಮಾಡುತ್ತದೆ.

No comments:

Post a Comment