Saturday, October 12, 2019

ಕುಮಾರವ್ಯಾಸನಿಂದ ಬಿಡಿಸಿಕೊಳ್ಳಲು ಪರ್ವ ಬರೆದೆ - ಭೈರಪ್ಪನವರ ಭಾಷನದ ಬರಹರೂಪ.

ನಾನು ಪರ್ವ ಬರೆದು 40 ವರ್ಷವಾಯಿತು. 1975-76 ರಲ್ಲಿ ನಾನು ಅದನ್ನ ಬರೆದೆ. ಅದು ಪ್ರಕಟವಾದದ್ದು1979ರಲ್ಲಿ. ಅಲ್ಲಿಗೆ ನನ್ನ ಕೆಲಸ ಮುಗೀತು. ಮತ್ತೆ-ಮತ್ತೆ ನಾನು ಪರ್ವದ ಕುರಿತು ಆಲೋಚನೆ ಮಾಡುವುದೇ ಇಲ್ಲ. ಒಂದು ವೇಳೆ ಮಾಡಿದರೆ ನನಗೆ ಮುಂದಿನದೇನು ಬರವಣಿಗೆ ಮಾಡೋಕ್ಕಾಗಲ್ಲ. ಈ ಸಂದರ್ಭದಲ್ಲಿ ಸುಮ್ಮನೆ ಜ್ಞಾಪಕಕ್ಕೆ ಬಂದ ಕೆಲವು ವಿಷಯಗಳನ್ನು ಹೇಳತ್ತೆನೆ. ಪರ್ವ ಪ್ರಕಟವಾದ ಮೊದಲ ವರ್ಷದಲ್ಲಿ ನಮ್ಮ ಕೆಲವು ಬುದ್ಧಿವಂತ ವಿಮರ್ಶಕರು(?) ಅದಕ್ಕೆ ಒಂದು ಹಣೆಪಟ್ಟಿಯನ್ನು ಕಟ್ಟಿಬಿಟ್ಟರು. ಪರ್ವದ ವೈಶಿಷ್ಟ್ಯ ಇರುವುದು ಮಿತ್‌ನ್ನು ತಿರುಚಿರುವುದರಲ್ಲಿ. ಮಿತ್‌ನಲ್ಲಿ ಎಂಥಹ ವೈಶಿಷ್ಟ್ಯಗಳಿವೆ ಸಾಹಿತ್ಯದಲ್ಲಿ ಅದನ್ನೆಲ್ಲ ಹಾಳು ಮಾಡಿ ಭೈರಪ್ಪನವರು ಶುಷ್ಕವಾದ ಒಂದು ಕಾದಂಬರಿಯನ್ನು ಬರೆದಿದ್ದಾರೆ” ಇಷ್ಟು ಕೇಳಿ ಪರ್ವವನ್ನು ಅಲ್ಲೆ ಬಿಟ್ಟುಭೈರಪ್ಪೆಂದರೆ ಮಿತ್‌ನ್ನು ತಿರುಚುವವರು ಎನ್ನುವ ಪ್ರಚಾರ ಶುರು ಮಾಡಿದರು.

ನಾನು ನಿಜವಾಗಿಯೂ ಮಿತ್‌ನ ವಿರೋಧಿ ಅಲ್ಲ. ಪರ್ವ ಬರೆದ ನಂತರ ಸಾಕ್ಷಿ ಕಾದಂಬರಿಯನ್ನು ಬರೆದೆ. ಅದರಲ್ಲಿ ಮಿತ್‌ನ್ನು ತಂದಿದ್ದೆನೆ. ಯಾಕೆಂದರೆ ಸಾಕ್ಷಿಭಾವ ನಮ್ಮಲ್ಲಿ ಬಂದಾಗ ನಾವು ಏನು ಗ್ರಹಿಸುತ್ತೆವೆಯೋ ಅದು ಮಾತ್ರ ಸತ್ಯಬೇರೆ ಯಾವದೂ ಸತ್ಯ ಅಲ್ಲ. ಸತ್ಯ ನಮಗೆ ಗೊತ್ತಾಗಬೇಕಾದರೆ ನಾವು ಒಳಗಡೆಯಿಂದ ಶುದ್ಧವಾಗುತ್ತಾ ಹೋಗಬೇಕು. ಇದನ್ನ ನಾನು ಸಾಕ್ಷಿ ಕಾದಂಬರಿಯಲ್ಲಿ ಹೇಳಬೇಕಾದರೆ ಮಿತ್‌ನ್ನು ಉಪಯೊಗಿಸಬೇಕಾಯಿತು. ನನ್ನ ಪ್ರಕಾರ ಸಾಹಿತ್ಯದ ಕೆಲಸವೆಂದರೆ ಶೋಧನೆಮೌಲ್ಯಶೋಧನೆ ಮತ್ತು ಸತ್ಯಶೋಧನೆ. ಆ ಶೋಧನೆಗೆ ಅನುಕೂಲಕರವಾಗುವ ಕಡೆಗಳಲ್ಲಿ ನಾನು ಮಿತ್‌ನ್ನು ಸಾಕ್ಷಿ ಕಾದಂಬರಿಯಲ್ಲಿ ಬಳಸಿದ್ದೆನೆ. ಆದರೆ ಇದನ್ನೆ ಪರ್ವ ಕಾದಂಬರಿಯಲ್ಲಿ ಬಳಸಿಲ್ಲ ಯಾಕೆದಂರೆ ಮಿತ್‌ನ್ನು ಎಲ್ಲರೂ ಬಳಸಿದ್ದಾರೆ. ವ್ಯಾಸ ಮತ್ತು ಅನಂತರ ಬಂದ ಅದೆಷ್ಟೋ ಕವಿಗಳು ಹಾಗೂ ಆಧುನಿಕ ಕವಿಗಳು ಅದನ್ನು ಉಪಯೊಗಿಸಿದ್ದಾರೆ. ಕುಮಾರವ್ಯಾಸನಂತೂ ಮಿತ್‌ಗು ರಿಯಾಲಿಟಿಗು ವ್ಯತ್ಯಾಸ ಗೊತ್ತಾಗದ ಹಾಗೆ ಉಪಯೋಗಿಸಿಬಿಟ್ಟಿದ್ದಾನೆ. ಆದ್ದರಿಂದ ಅದನ್ನೆ ನಾನು ಉಪಯೋಗಿಸಿದರೆ ಹೊಸದಾಗಿ ಎನೂ ಹೇಳಲು ಸಾಧ್ಯವಿಲ್ಲ ಆದ್ದರಿಂದ ನಾನು ಪರ್ವದಲ್ಲಿ ಮಿತ್‌ ತೆಗೆದುಹಾಕಿದ್ದಿನೆ.ವಾಸ್ತವವಾಗಿ ನಮ್ಮ ಕರ್ನಾಟಕದಲ್ಲಿ ಎಲ್ಲರಲ್ಲಿ ತುಂಬಿರುವುದು ಕುಮಾರವ್ಯಾಸ ಭಾರತವೆ ಹೊರತುವ್ಯಾಸ ಭಾರತವನ್ನು ಹೆಚ್ಚು ಜನರು ಓದಿರುವುದಿಲ್ಲ. ನನಗೆ ತುಂಬಿಕೊಂಡಿರುವುದೂ ಕುಮಾರವ್ಯಾಸ ಭಾರತವೆ. ಕುಮಾರವ್ಯಾಸ ಭಾರತವನ್ನು ಓದಿ ಮೇಲೆಯೇ ಇದೇನಿದು ಮಹಾಭಾರತದಲ್ಲಿ ಹೀಗೆಲ್ಲ ನಡೆದಿತ್ತಲ್ಲ ಎಂಬ ಅನುಮಾನಗಳು ಹುಟ್ಟೊಕ್ಕೆ ಶುರುವಾದದ್ದು. ಪರ್ವ ಬರೆಯುವುದಕ್ಕೆ ಪ್ರಚೋದನೆ ಸಿಕ್ಕಿದ್ದೂ ಈ ಕುಮಾರವ್ಯಾಸ ಭಾರತದಿಂದ. ಕುಮಾರವ್ಯಾಸ ಭಾರತದ ಬಗ್ಗೆ ನನಗೆ ಇದ್ದ ಅಸಮಧಾನ ನನಗೆ ಪರ್ವ ಬರೆಯುವುದಕ್ಕೆ ಪ್ರಚೋದನೆಯಾಯಿತು. ಆವಾಗ ವ್ಯಾಸ ಏನು ಹೇಳಿದ್ದಾರೆ ಎಂದು ನೋಡಬೇಕೆನ್ನಿಸಿತು. ಆವಾಗ ವ್ಯಾಸ ಭಾರತವನ್ನು ಕ್ರಮವಾಗಿ ಓದುವುದಕ್ಕೆ ಸುರುಮಾಡಿದೆ. ಆವಾಗ ನನಗನಿಸಿದ್ದು ಕುಮಾರವ್ಯಾಸರಿಗಿಂತ ವ್ಯಾಸರು ಹೆಚ್ಚು ರಿಯಲಿಸ್ಟಿಕ್. ವ್ಯಾಸರಲ್ಲಿನ ಮಿತ್‌ನ್ನು ತೆಗೆದುಹಾಕಿದರೆ ಹೆಚ್ಚು ರಿಯಲಿಸ್ಟಿಕ್ ಆಗುತ್ತೆ. ಆದರೆ ಕುಮಾರವ್ಯಾಸ ಹಾಗೆ ಮಾಡಲಿಲ್ಲ. ಕೃಷ್ಣನೊಬ್ಬನ ಸಲುವಾಗಿ ಒಂದಿಷ್ಟು ಹೆಚ್ಚೇ ಎನ್ನುವಂತಹ ಪದ್ಯಗಳನ್ನು ಖರ್ಚುಮಾಡಿದ್ದಾನೆ. ಈ ಅಸಮಾಧಾನದಿಂದ ಬಿಡಿಸಿಕೊಳ್ಳಲು ನಾನು ಪರ್ವವನ್ನು ಬರೆದೆ. ಬರೆದ ಮೇಲೆ ನನಗನ್ನಿಸಿದ್ದು ನಾನು ಕುಮಾರವ್ಯಾಸರಿಂದ ಬಿಡಿಸಿಕೊಂಡಿದ್ದೆನೆ.ನನ್ನ ಪ್ರಕಾರ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕುಮಾರವ್ಯಾಸನಂಥಹ ದೊಡ್ಡಕವಿ ಇನ್ಯಾರು ಇಲ್ಲ. ಕೆಲವು ಪಂಡಿತರು ಪಂಪನನ್ನು ಸೂಚಿಸಬಹುದು. ಆದರೆ ನನ್ನ ಪ್ರಕಾರ ಪಂಪ ಕುಮಾರವ್ಯಾಸನ ಮಟ್ಟಕ್ಕೆ ಬರ್ತಾನೆ ಎಂದು ಅನ್ನಿಸುವುದೇ ಇಲ್ಲ. ಅದಕ್ಕೆ ಭಾಷೆ ಒಂದು ಅಡಚಣೆಯೂ ಇರಬಹುದು. ಆದರೆ ಭಾಷೆ ಇರುವುದು ಎಂಥಕ್ಕೆಸುಲಬವಾಗಿ ಅರ್ಥವಾಗುವುದಕ್ಕೆ. ಬರೀ ಕಲಿತಭಾಷೆಯ ದೊಡ್ಡ-ದೊಡ್ಡ ಶಬ್ದಗಳನ್ನು ಹಾಕಿ,ಬರೆದುಬಿಟ್ಟರೆ ದೊಡ್ಡಕವಿ ಅಂತಾಗುವುದೇಇಲ್ಲ. ಸರಳವಾದ ಭಾಷೆಯಲ್ಲಿ ಗಹನವಾದದ್ದನ್ನು ಹೇಳಬೇಕು. (ಆದುನಿಕ ಕಾವ್ಯದಲ್ಲಿ ಅದಕ್ಕೆ ದೊಡ್ಡ ಉದಾಹರಣೆ ಎಂದರೆ ಬೇಂದ್ರೆ.) ಇಂತದ್ದನ್ನು 600 ವರ್ಷಗಳ ಹಿಂದೆಯೆ ಬಳಸಿದ್ದ ಮಹಾನ್ ಕವಿಯೆಂದರೆ ಕುಮಾರವ್ಯಾಸ. ಅವನಿಂದ ನಾನು ಬಿಡಿಸಿಕೊಳ್ಳಬೇಕೆಂದು ನಾನು ಪರ್ವವನ್ನು ಬರೆದೆ. ಬರೆದ ನಂತರ ಸಂಪೂರ್ಣವಾಗಿ ಕುಮಾರವ್ಯಾಸನಿಂದ ಬಿಡಿಸಿಕೊಂಡೂ ಬಿಟ್ಟೆ. ಪರ್ವಕ್ಕೆ ಆಧಾರವಾದವರು ಕುಮಾರವ್ಯಾಸರೆ. ಆಮೇಲೆ ಕುಮಾರವ್ಯಾಸ ಭಾರತವನ್ನು ಓದಬೇಕೆನ್ನಿಸಿ ಒಂದೆರಡು ವರ್ಷ ಕಳೆದ ನಂತರ ನಾನು ಮತ್ತೆ ಕುಮಾರವ್ಯಾಸ ಭಾರತವನ್ನು ಓದೊದಿಕ್ಕೆ ಸುರು ಮಾಡಿದೆ. ಆವಾಗ ಗೊತ್ತಾಗಿದ್ದು ಕುಮಾರವ್ಯಾಸ ಎಂತಹ ದೊಡ್ಡಕವಿಯೆಂದು ಅರ್ಥವಾಗಿ ಕುಮಾರವ್ಯಾಸ ಭಾರತವನ್ನು ಮತ್ತೆ ತೆಲೆಯ ಮಾಲೆ ಇಟ್ಕೊಳ್ಳಲಿಕ್ಕೆ ಸುರುಮಾಡಿದೆ.ನಿಮಗೆ ಹೇಳುವುದೆನೆಂದರೆ ಪರ್ವವನ್ನು ಓದುವಾಗ ಕುಮಾರವ್ಯಾಸ ಭಾರತವನ್ನು ಮರೆತುಬಿಡಿ,ಕುಮಾರವ್ಯಾಸ ಭಾರತವನ್ನ ಓದುವಾಗ ಪರ್ವವನ್ನು ಮರೆತುಬಿಡಿ. ಎರಡರ ಪಾಯಿಂಟ್ ಆಫ್ ವ್ಯೂ ಬೇರೆ-ಬೇರೆಯೆ. ಕುಮಾರವ್ಯಾಸ ಕೊಡದೆ ಇದ್ದದ್ದನ್ನ ನಾನು ಪರ್ವದಲ್ಲಿ ಕೊಡೊದಕ್ಕೆ ಸಾದ್ಯವಾಗಿರುವುದಕ್ಕೆ ಕಾರಣವೆನೆಂದರೆ ಆ ಮಿತ್‌ಗಳನ್ನೆಲ್ಲ ಕಳೆದುಕೊಂಡು ರಿಯಲಿಸಮ್ ಗೆ ಬಂದದ್ದು. ನಮ್ಮ ಹಿಂದಿನ ಕವಿಗಳನೇಕರಲ್ಲಿ ರಿಯಲಿಸಮ್ ಎನ್ನುವುದು ಅಷ್ಟು ಇರಲಿಲ್ಲ. ನಮ್ಮ ದೇಶದ ಥಿಂಕಿಂಗ್ ಗ್ರೋ ಗಳಲ್ಲೆನೆ ಮಿತ್ ಬೆಳೆದು ಬಂದಿದೆ. ವೇದ ಉಪನಿಷತ್‌ನಲ್ಲಿ ನೋಡಿದರೂ ಮಿತ್ ನ ಮೂಲಕ ಗಹನವಾದ ಸತ್ಯವನ್ನು ಹೇಳಿದರು. ಇದು ನಮ್ಮ ದೇಶದಲ್ಲಷ್ಟೆ ಅಲ್ಲ ಗ್ರೀಕ್ ಫಿಲಾಸಪಿಯಲ್ಲೂ ಉಂಟು. ಪ್ಲೇಟೊನ ಡೈಲಾಗ್ಸಗಳನ್ನು ಓದಿದರೆ ಅವನು ಉಪಯೋಗಿಸಿದ ಹಾಗೂ ಬಳಕೆ ಮಾಡಿದ ಮಿತ್‌ನ ಬಗ್ಗೆ ನಮಗೆ ತಿಳಿಯುತ್ತದೆ. ಮಿತ್‌ನ್ನು ಬಿಟ್ಟು ನಮಗೆ ಜೀವನದಲ್ಲಿ ಗಹನವಾದದ್ದನ್ನು ಹೇಳಲು ಸಾಧ್ಯವೇ ಇಲ್ಲ. ಆದರೆ ಆ ಮಿತ್‌ಗಳನ್ನು ಕಾವ್ಯಕ್ಕೊಸ್ಕರ ಗಹನವಾದದ್ದನ್ನು ಹೇಳುವುದಕ್ಕಾಗಿ ಇಟ್ಟೊಕೊಂಡರೆ ಮಾತ್ರ ಕ್ಷೇಮ. ಅದನ್ನು ಬಿಟ್ಟು ಮಿತ್‌ನಿಂಲೇ ಜೀವನವನ್ನು ನಡೆಸುತ್ತೆನೆ ಅಂತ ಹೋದರೆ ನಮ್ಮ ಅದಃಪತನ ಶುರುವಾದಂತೆಯೆ. ನಮ್ಮ ಭಾರತ ದೇಶ ಆದಃಪತನವಾದದ್ದು ಇದಕ್ಕೊಸ್ಕರವಾಗಿಯೇ. 
ಇನ್ನು ಪರ್ವದ ವಿಮರ್ಶೆಯ ವಿಷಯಕ್ಕೆ ಬರುವುದಾದರೆ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಬಿಟ್ಟರೆ ಯಾರೂ ಮೂಲ ಭಾರತವನ್ನು ಓದಿ ಪರ್ವವನ್ನು ವಿಮರ್ಶೆ ಮಾಡಲಿಲ್ಲ. ಕೆಲವೊಬ್ಬರು ಓದಿದ್ದರ ಬಗ್ಗೆ ತಮಗೆ ತೋಚಿದ್ದನ್ನು ಹೇಳಿದ್ದಾರೆಯೆ ಹೊರತುಸರಿಯಾದ ವಿಮರ್ಶೆ ಇಲ್ಲಿಯವರೆಗೆ ಮಾಡಿಲ್ಲ. ನನ್ನ ಪ್ರಶ್ನೆ ವ್ಯಾಸ ಭಾರತವನ್ನು ಓದದೆ ಪರ್ವವನ್ನು ಹೇಗೆ ವಿಮರ್ಶೆ ಮಾಡೊದಿಕ್ಕೆ ಸಾಧ್ಯಮಹಾಭಾರತದ ಬಗ್ಗೆ ಎಷ್ಟು ಕೃತಿಗಳು ರಚನೆಯಾಗಿದ್ದರೂ ಅದಕ್ಕೆಲ್ಲಾ ವ್ಯಾಸ ಭಾರತವೇ ಮೂಲ. ನನಗೂ ಕೂಡ ವ್ಯಾಸ ಭಾರತ ಇಲ್ಲದಿದ್ದರೆ ಪರ್ವದ ರಚನೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಪ್ರಕಾರ ವ್ಯಾಸ ಭಾರತದಂತ ದೊಡ್ಡ ಕಾದಂಬರಿ ಯಾವುದು ಇಲ್ಲ. ಅದನ್ನ ಓದ್ಕೊಂಡು ನಾನು ಒಂದು ಕಾದಂಬರಿಯನ್ನು ಬರೆದಿದ್ದೆನೆ. ಇನ್ನಾರೋ ಅದರ ಪ್ರಚೋದನೆ ಪಡ್ಕೊಂಡು ಇನ್ನೊಂದು ಕಾದಂಬರಿ ಬರೆಯಬಹುದುಕಾವ್ಯವನ್ನು ಬರೆಯಬಹುದು.
ಸಾಹಿತ್ಯ ಸೃಷ್ಟಿಗೆ ಒಂದು Vision ಇರಬೇಕು. Vision ಇರಲಾರದ ಸಾಹಿತ್ಯ ಯಾವತ್ತು ಉತ್ತಮ ಸಾಹಿತ್ಯ ಆಗಲಾರದು. ಆ Vision ಅನ್ನೋದು ಯಾವತ್ತು ಉತ್ತಮವಾಗಿರಬೇಕು. ಅದನ್ನು ಬಿಟ್ಟು ಯಾವುದೋ ಐಡಿಯಾಲಜಿ ಇಟ್ಕೊಂಡು ಸಮಾಜದ ವಿರುದ್ಧ ನಾನು ಎಲ್ಲ ಮಾಡ್ತಿನಿ ಅನ್ಕೊಂಡುಪ್ರೊಟೆಸ್ಟ್ ಮಾಡ್ತಿನಿ ಅನ್ಕೊಂಡು ಬರೆದರೆ ಅದು ಎಂದಿಗೂ ಉತ್ತಮ ಸಾಹಿತ್ಯ ಆಗಲಾರದು.

ಮಿತ್‌ನಲ್ಲಿ ನೋಡಿದಾಗ ಕೃಷ್ಣ ಎಷ್ಟು ದೊಡ್ಡ ಕೆಲಸ ಮಾಡಿದ್ದಾನೆ. ಕುಮಾರವ್ಯಾಸರ ಭಾರತ ಓದಿದಾಗ ಕೃಷ್ಣ ಎಷ್ಟೊಂದೆಲ್ಲ ಕೆಲಸ ಮಾಡಿದ. ಅವನು ದೇವರು, ಅವನಿಗೆ ಕಾಣದೆ ಇರುವಂತದ್ದು ಏನಿದೆ. ಅವನು ಸರ್ವಶಕ್ತ ಆದ್ದರಿಂದ ಮಾಡಿದ. ಅದು ನಮ್ಮ ಕೈಲಿ ಆಗುವಂತದ್ದಲ್ಲ ಎಂದು ನಾವು ಆರಾಮವಾಗಿ ಇದ್ದುಬಿಡ್ತಿವಿ. ಅದನ್ನೆ ರಿಯಾಲಿಟಿಯಲ್ಲಿ ನೋಡಿದರೆ ಕೃಷ್ಣ ಒಬ್ಬ ಮನುಷ್ಯ, ಅವನು ಇಂತಹ ಕೆಲಸ ಮಾಡಿದ, ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ. ರಾಜಕಿಯವಾಗಿ ಯಾವ ತಂತ್ರದಿಂದ ಯಾವ ಬಗೆಯಿಂದ ಮಾಡಿದ ಎಂಬುವುದನ್ನು ನೋಡಿದರೆ ಕೃಷ್ಣನಿಗೆ ಆವತ್ತು ಸಾಧ್ಯವಾದದ್ದು ನಮಗೂ ಸಾಧ್ಯವಾಗುತ್ತದೆ. ಮಹಾಭಾರತದಲ್ಲಿ ಧರ್ಮರಾಯಅಶ್ವತ್ಥಾಮ ಹತಃ ಕು೦ಜರಃ ಎನ್ನುವುದನ್ನು ನಮ್ಮ ಪಂಡಿತರು ಈಗಲೂ ಚರ್ಚೆ ಮಾಡ್ತಿದಾರೆ. “ಧರ್ಮರಾಯ ಅಂದರೆ ಯಮನ ಮಗ, ಯಮನ ಮಗ ಅಂದರೆ ಅವ ಧರ್ಮವಾಗಿಯೇ ಇರಬೇಕು, ಅವನು ಮಾಡಿದ್ದೂ ಸಹ ಧರ್ಮವಾಗಿಯೇ ಇರಬೇಕು, ರಾಜನಾದವನು ಜೂಜು ಆಡಲೇ ಬೇಕು, ಹಿಗೆಲ್ಲ ಇರುವ ಮಿತ್‌ನ್ನು ಆಕ್ಸೆಪ್ಟ್ ಮಾಡಿಕೊಂಡು ಬಿಟ್ಟರೆ ಹಿಗೆಲ್ಲಾ ಆಗುತ್ತದೆ. ಯುದ್ದ ಅನ್ನುವದು ಒಂದು ಟೂರ್ನಮೆಂಟ್ ಅಲ್ಲ. ಅಲ್ಲಿ ತಿರ್ಪುಗಾರ ಇರಲ್ಲ. ಅಲ್ಲಿ ಮೋಸ ಅನ್ನುವುದು ಇದ್ದೇ ಇರುತ್ತದೆ. ಒಂದು ಮಾತಿದೆ. “ಯುದ್ದ ಮತ್ತು ಪ್ರೀತಿಯಲ್ಲಿ ಸುಳ್ಳು ಇದ್ದೇ ಇರುತ್ತದೆ. ಇಲ್ಲದಿದ್ದರೆ ಇವೆರಡನ್ನು ಗೆಲ್ಲೊದಕ್ಕೆ ಸಾಧ್ಯವಾಗುವುದಿಲ್ಲ” ಇದು ಕೇಳುವುದಕ್ಕೆ ತಮಾಸೆಯಾಗಿ ಇರಬಹುದು ಆದರೆ ಇದು ಸತ್ಯ. ಅಶ್ವತ್ಥಾಮ ಹತಃ ಕು೦ಜರಃ ಅನ್ನುವಾಗ ಕೃಷ್ಣ ಶಂಖ ಉದುತ್ತಾನೆ. ಆವಾಗ ಧರ್ಮರಾಯ ಏನ್ ಮಾಡ್ಬೇಕಿತ್ತು, ಇನ್ನೊಂದಸಲ ಹೇಳ್ಬೇಕಿತ್ತಾ? ಹೀಗೆ ನಮ್ಮ ದೇಶದ ಪಂಡಿತರು ಮಿತ್‌ನ ಹಿಡಿದುಕೊಂಡು ಇಂತದ್ದೆ ಚರ್ಚೆ ಮಾಡಿದರು. ನಾನು ಪರ್ವ ಬರೆದ ನಂತರ ಒಬ್ಬ ಮಹಿಳೆ ನನ್ನ ಹತ್ತಿರ ಬಂದು ನೀವು ಧರ್ಮರಾಯನ ಪಾತ್ರಕ್ಕೆ ತುಂಬಾ ಅನ್ಯಾಯ ಮಾಡಿದಿರಿ ಅಂದಾಗ ನಾನು ಆ ಮಹಿಳೆಗೆ ನಿಮ್ಮ ಮಗಳನ್ನು ಧರ್ಮರಾಯನಂತ ಗಂಡು ಸಿಕ್ಕರೆ ಮದುವೆ ಮಾಡಿ ಕೊಡ್ತರಾ ಎಂದಾಗ ಅಂಥಹ ಜೂಜುಕೋರನಿಗೆ (ಇಸ್ಪೀಟ್ ಆಟುವವನಿಗೆ)  ನನ್ನ ಮಗಳನ್ನು ಹೇಗೆ ಕೊಡಲಿ ಅಂತ ಮುಂದೆಂದೂ ಅವರು ನನ್ನ ಜೊತೆಗೆ ಪರ್ವದ ಬಗ್ಗೆ ಮಾತನಾಡಲಿಲ್ಲ.
ರಾಮ ವಾಲಿಗೆ ಭಾಣ ಹೊಡೆದು ಅವನನ್ನು ಕೊಂದ ಅಂತ ನಮ್ಮ ಪಂಡಿತ ವರ್ಗ ಇಂದಿಗೂ ಅವನನ್ನು ದ್ವೇಷಿಸ್ತಾರೆ.  ಅಲ್ಲಿ ರಾಮ ಇದ್ದದ್ದು ಒಂಟಿ, ಆದರೆ ವಾಲಿಯ ಹತ್ತಿರ ಸಂಪೂರ್ಣ ಸೈನ್ಯವೇ ಇತ್ತು. ಆ ಸಂದರ್ಭದಲ್ಲಿ ವಾಲಿಯನ್ನು ಸೋಲಿಸಿದರೆ ಇಡೀ ಸೈನ್ಯ ಸುಗ್ರಿವನ ವಶವಾಗುತ್ತದೆ. ವಶವಾದ ನಂತರ ರಾಮನಿಗೆ ಸುಗ್ರೀವ ಸೀತೆಯನ್ನು ಹುಡುಕಲು ಸಹಾಯ ಮಾಡುತ್ತಾನೆ ಎನ್ನುವ ಅಗ್ರಿಮೆಂಟ್ ಆಗಿರುತ್ತದೆ. ಆ ಅಗ್ರಿಮೆಂಟ್ ಇಟ್ಟುಕೊಂಡು ಮರೆಯಲ್ಲಿ ನಿಂತು ಹೊಡೆಯದೆ ಎದುರಿಗೆ ನಿಂತು ಹೊಡೆದರೆ ವಾಲಿ ಸುಮ್ಮನಿರುತ್ತಾನಾ? ಅವನ ಸೈನ್ಯ ಸುಮ್ಮನಿರತ್ತಾ? ಈ ರಿಯಾಲಿಟಿಯನ್ನು ನಮ್ಮವರು ಮರೆತೆ ಬಿಟ್ಟರು. ಅದನ್ನು ಬಿಟ್ಟು ರಾಮ ಹೀಗೆ ಮಾಡಬಹುದಾ? ಅಲ್ಲಿಯಿಂದ ಇಂದಿನ ತನಕ ರಾಮ ಕ್ರಿಟಿಸಿಸಮ್‌ನ ವಸ್ತುವಾಗಿಯೆವಾಗಿಯೆ ಇದ್ದಾನೆ. ಯಾವಾಗ ರಿಯಲಿಸಮ್ ಅನ್ನುವುದು ಇರುವುದಿಲ್ಲವೋ ಆವಾಗ ಹಿಗೇಯೆ ಆಗುವುದು. ಆದ್ದರಿಂದ ನಮ್ಮ ನಿಜ ಜೀವನದ ಸಣ್ಣ-ಸಣ್ಣ ಘಟನೆಗಳನ್ನು, ಪ್ರಥಮಾ ಪುರುಷನನ್ನು  ತೆಗೆದುಕೊಂಡು ಹೀಗೆ ನಡೆಯಿತು ಎಂದು ಹೇಳುವಾಗ ಪಾಶ್ಚಾತ್ಯ ಸಾಹಿತ್ಯದಲ್ಲಿ ಕಾದಂಬರಿ ಎನ್ನುವ ಪ್ರಕಾರ ಶುರುವಾದಾಗ ರಿಯಲಿಸಮ್ ಎನ್ನುವುದು ಸುರುವಾಯಿತು. ಹೀಗೆ ವಾಸ್ತವತೆಯನ್ನು ತೆಗೆದುಕೊಂಡು ಕಾದಂಬರಿ ಬರೆಯುವಾಗ ಅಲ್ಲಿ ರಿಯಲಿಸಮ್ ಬರುತ್ತದೆ ಮತ್ತು ಸಣ್ಣ ಸಣ್ಣ ಪಾತ್ರಗಳಿಗೂ ಪ್ರಮುಖ್ಯತೆ ಬರುತ್ತದೆ. ಕಾದಂಬರಿ ಬೆಳದದ್ದೆ ಹಾಗೆ. ಆವಾಗ ನಾನು ಕಾದಂಬರಿಯ ಪ್ರಕಾರವನ್ನು ತೆಗೆದುಕೊಳ್ಳಬೇಕಾಯಿತು.
ಇಷ್ಟಾಗಿಯೂ ನಮ್ಮದೇಶದಲ್ಲಿ ಸಾಹಿತ್ಯ ಹುಟ್ಟಿದ್ದು ಹೇಗೆ ಎಂದರೆ. ನಮ್ಮ ದೇಶದ ಸಂಸ್ಕೃತಿ ಆರಂಭವಾದದ್ದು ವೇದದಿಂದ. ವೇದದ ಮೌಲ್ಯಗಳೇ ಎಲ್ಲದಕ್ಕೂ ಆಧಾರ. ಆದರೆ ವೇದ ರಾಶಿಯಾಗಿ ಬೆಳೆದು ಬಿಟ್ಟಿತು. ನಂತರ ವೇದದ ಸಾರಗಳಾಗಿ ಉಪನಿಷತ್‌ಗಳು ಭೆಳೆದವು. (ಪಾಶ್ಚಾತ್ಯರು ವೇದಕ್ಕೆ ಪ್ರೋಟೆಸ್ಟ್ ಆಗಿ ಉಪನಿಷತ್‌ಗಳು ಬಂದವು ಎಂದು ವಾದ ಮಾಡುತ್ತಾರೆ. ಇದು ಅವರ ಕ್ರೀಯೇಟಿವ್ ಆರ್ಗ್ಯೂರ್ಮೆಂಟ್ ಅಷ್ಟೆ). ನಂತರ ಉಪನಿಷತ್‌ಗಳನ್ನು  ಬಾದರಾಯನ ಎನ್ನುವ ಋಷಿ ಸೂತ್ರರೂಪದಲ್ಲಿ (ಸೂತ್ರ ಎಂದರೆ ಥೆಯರಿ ಅಥವಾ ಫಾರ್ಮುಲಾ) ಹೇಳಿದ. ಅದಕ್ಕೆ ಬಾದರಾಯನ ಭ್ರಹ್ಮಸೂತ್ರಗಳು ಎಂದು ಕರೆಯುತ್ತಾರೆ. ನಂತರ ಈ ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ಉಪನಿಷತ್‌ಗಳಿಗಿಂತ ಕಬ್ಬಿನ ಕಡಲೆಯಾಯಿತು. ಯಾವುದೇ ಒಂದು ಕಾವ್ಯವನ್ನು ಸಂಕಿಪ್ತ ಮಾಡಿ ಹೇಳಬೇಕಾದರೆ ಅದು ಇನ್ನೂ ಕಠಿಣವಾಗಿ ಬಿಡುತ್ತದೆ. ನಂತರ ಶಂಕರಾಚಾರ್ಯರು, ಮದ್ವಾಚಾರ್ಯರು, ಶ್ರೀ ವೈಶ್ಣವರು ಬಂದರೂ ಸಹಿತ ಎಲ್ಲಾ ಗೊಂದಲವಾಗಿಯೆ ಉಳಿಯಿತು. ಆದರೆ ಈ ವೇದ ಮತ್ತು ಉಪನಿಷತ್‌ಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಿಳಿಯುವಂತೆ ಮಾಡಿದವರು ಮೊದಲು ವಾಲ್ಮಿಕಿ ನಂತರ ವ್ಯಾಸರು. ವಾಲ್ಮಿಕಿ ತಮ್ಮ ಕಾಲದ ಮೌಲ್ಯಗಳನ್ನು ರಾಮಾಯಣದಲ್ಲಿ ಇಟ್ಟರು. ಇವಾಗಲೂ ಯಾರಾದರು ಮೌಲ್ಯದ ಬಗ್ಗೆ ಹೇಳಬೇಕಾದರೆ ಹೆಚ್ಚಾಗಿ ಉದಾರಣೆಯಾಗಿ  ಬರುವುದು ರಾಮಾಯಣ. ಆದರೆ ಮಹಾಭಾರತ ಹಾಗಲ್ಲ ಅದು ವೇದಗಳ ಮೌಲ್ಯ ಸಂಘರ್ಷ ತಿಳಿಸಿ ನಂತರ ಅದರ ಉತ್ತುಂಗತೆಯನ್ನು ತಿಳಿಸುತ್ತದೆ.
          ಬಾರತದ ಪೂರ್ವ ಸಾಹಿತ್ಯ ಪರಂಪರೆಯಲ್ಲಿ 2 ಪ್ರಕಾರಗಳು, ಒಂದು ವ್ಯಾಸ-ವಾಲ್ಮಿಕಿಯರದ್ದು ಇವರು ವೇದ-ಉಪನಿಷತ್, ಪುರಾಣಗಳ ಕಥೆ ಮತ್ತು ಉಪಕಥೆಗಳನ್ನೆಲ್ಲಾ ಸೇರಿಸಿ ಸಾಹಿತ್ಯ ಸೃಷ್ಟಿ ಮಾಡಿದರು. ಇನ್ನೊಂದು ಪರಂಪರೆ ಕಾಳಿದಾಸನ ಮಾದರಿ. ಇದು ಕ್ರಮಬದ್ಗವಾದ ಸಾಹಿತ್ಯ ದೃಷ್ಟಿಯಿಂದ ರಚನೆಯಾದದ್ದು. ನಂತರ ಬಂದ ಎಲ್ಲ ಕವಿಗಳು ಈ ಎರಡು ಕಾವ್ಯ ಪರಂಪರೆಯ ಮೌಲ್ಯಗಳನ್ನು ತೆಗೆದುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿದರು. ಇದು ಇಡೀ ದೇಶದ ತುಂಬ ವ್ಯಾಪಿಸಿತು. ಎಲ್ಲಿಯವರೆಗೂ ವಿಸ್ತರಿಸಿದೆ ಎಂದರೆ ನಮ್ಮ ದೇಶದಲ್ಲಿ ಎಲ್ಲೇ ಹೋದರೂ ರಾಮಪುರ, ಪಾಂಡವಪುರ, ಕುಂತಿಬೆಟ್ಟ ಎಂಬಿತ್ಯಾದಿ ಹೆಸರುಗಳು ಕಾಣಸಿಗುತ್ತದೆ. ಹೀಗೆ ರಾಮಾಯಣ ಮತ್ತು ಮಹಾಭಾರತಗಳು ದೇಶದ ಎಲ್ಲೆಡೆಗೆ ಆವರಿಸಿಕೊಂಡು ಬಿಟ್ಟಿವೆ. ಈ ತರಹ ಆವರಿಸಿದ್ದನ್ನು ಬದಲಾಯಿಸದಿದ್ದರೆ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಆದುನಿಕವಾಧಿಗಳು ಹೇಳುತ್ತಿದ್ದಾರೆ. ಅದನ್ನು ಒಡೆದುಹಾಕಲು ಶತಃಪ್ರಯತ್ನಗಳನ್ನು ಪಡುತ್ತಿದ್ದಾರೆ.
          ನಮ್ಮ ಕನ್ನಡದ ಒಬ್ಬ ನಾಟಕಕಾರ ಸೀತೆ ರಾವನನ ಬಗ್ಗೆ ಯೋಚನೆ ಮಾಡುತ್ತಾ “ರಾವನ ಎಷ್ಟಾದರೂ ಗಂಡಸು ಆತ ಮಕ್ಕಳನ್ನಾದರೂ ಹೆತ್ತಿದ್ದಾನೆ, ಈ ರಾಮ ನನಗೆ ಒಂದು ಮಗುವನ್ನಾದರೂ ಕೊಟ್ಟಿಲ್ಲ“ ಎಂದು ಸೀತೆಯ ಬಾಯಲ್ಲಿ ನಾಟಕದಲ್ಲಿ ಹೇಳಿಸುತ್ತಾನೆ. ಯಾಕೆಂದರೆ ಆ ಸೀತೆಯನ್ನು ಹೊಡೆದು ಹಾಕಬೇಕು. ಅವಳು ಎಂತಹ ಕಷ್ಟದಲ್ಲಿಯಾದರೂ ಸಹ ಪಾತಿವ್ರತ್ಯವನ್ನು ಕಾಪಾಡಿಕೊಂಡು ಬಂದಿದ್ದಳು. ಅವಳನ್ನು ಹೊಡೆದು ಹಾಕಿದರೆ ಸಮಾಜ ಬದಲಾವಣೆ ಮಾಡಲು ಸಾಧ್ಯ(?) ಎಂಬ ವಾದ ಸುರುವಾಯಿತು. ಈ ತರಹದ ಹಿಡನ್ ಐಡಿಯಾಲಜಿಗಳು ಬಂದವು. ಇಂತಹ ಪರಂಪರೆಗಳು ಈ ತನಕವೂ ಮುಂದುವರೆದಿದೆ. ಆದರೆ ನನ್ನ ದೃಷ್ಟಿ ಅದರಲ್ಲಿ ಯಾವುದನ್ನೂ ನಾಶಮಾಡುವುದು ಅಲ್ಲ. ನಾವು ನಮ್ಮಲ್ಲಿನ ಮೌಲ್ಯಗಳನ್ನು ಸ್ವೀಕರಿಸಿ ಆ ಮೌಲ್ಯಗಳನ್ನ ಸರಿಯಾಗಿ ಅನಲೈಸ್ ಮಾಡಬೇಕು. ನಾನು ಅದನ್ನು ಸ್ವೀಕರಣೆ  ಮಾಡಿ ಅದನ್ನು ಒಳಗೆ ವಿಮರ್ಶೆ ಮಾಡ್ತಿನಿ. ನನ್ನ ಬರವಣಿಗೆಗಳೆಲ್ಲ ಈ ತರಹದ್ದು ಇದೆ.
ನಾವು ಯಾವುದನ್ನಾದರೂ ವಿಮರ್ಶೆ ಮಾಡುವಾಗ ಅದು ವಾಸ್ತವವಾಗಿರಬೇಕು. ವ್ಯಾಸರು ಮತ್ತು ಕುಮಾರವ್ಯಾಸರು ಕೃಷ್ಣನಿಗೆ ಕೊಟ್ಟ ದೈವತ್ವವನ್ನು ತೆಗೆದು ಅದನ್ನು ನೋಡಿದರೆ ಕೃಷ್ಣ ಖಂಡಿತವಾಗಿಯೂ ನಮಗೆ ಮಾದರಿಯಾಗುತ್ತಾನೆ. ಅದಕ್ಕೆ ನಾನು ಪರ್ವದಲ್ಲಿ ಕೃಷ್ಣನನ್ನು ಆತರಹ ಸೃಷ್ಟಿಮಾಡಬೇಕಾಯಿತು. ಇತಿಹಾಸವನ್ನು ದಾಖಲಿಸಬೇಕಾದರೆ ನಮಗೆ Sense of realism ಬೇಕು. ಮಿತ್‌ನ್ನು ಹೇಗೆ ಉಪಯೋಗಿಸಬೇಕು ಮತ್ತು ಯಾವುದರ ಸಲುವಾಗಿ ಉಪಯೋಗಿಸಬೇಕು ಅನ್ನುವ ಪರಿಜ್ಞಾನ ಇಟ್ಕೊಂಡು ನಾವು ಸಾಹಿತ್ಯ ಕೃಷಿಯಲ್ಲಿ ತೊಡಗಬೇಕು. ಈ ಎಲ್ಲ ಹಿನ್ನಲೆಯಲ್ಲಿ ನಾನು ಪರ್ವವನ್ನು ಬರೆದೆ. 

-      ಶ್ರೀಶೈಲ ಮಗದುಮ್ಮ, ಮಂಗಳೂರು.


1 comment:

  1. Merkur 15c Safety Razor - Barber Pole - Deccasino
    Merkur 15C Safety sol.edu.kg Razor - https://vannienailor4166blog.blogspot.com/ Merkur - 15C for Barber jancasino.com Pole is the deccasino perfect introduction to the casinosites.one Merkur Safety Razor.

    ReplyDelete