Saturday, October 12, 2019

ತನಗೆ ತಾನೇ ಬರಕೊಂಡ ಎಂದಿಗೂ ರವಾನೆಯಾಗದ ಪತ್ರ "L"

ಅಥವಾ ಅದರಿಂದ ತಪ್ಪಿಸಿಕೊಳ್ಳಲು ಬರೆದ ಕಾದಂಬರಿಯಾ? ಹೇಳುವುದು ಕಷ್ಟ. ಕವಿಯೊಬ್ಬ/ಲೇಖಕನೋಬ್ಬ ತನ್ನ ಬರಹಗಳ ಹಿಂದಿರುವ ಅನುಭವಗಳನ್ನು ಶೋಧಿಸಹೊರಟಾಗ ಬರೆಯಲೇ ಬಾರದ ಹಾಗೂ ಬರೆಯದೇ ಇರಲಾರದ ವಿಷಯಗಳಿರ್ತಾವಲ್ಲ ಅದನ್ನೆಲ್ಲಾ ಸೇರಿಸಿ ತನಗೆ ತಾನೇ ಬರಕೊಂಡ ಎಂದಿಗೂ ರವಾನೆಯಾಗದ ಪತ್ರ ಈ "L".
"ಮದುವೆಯನ್ನು ಸಂಭ್ರಮಿಸಲಿಕ್ಕೆ ಸಾವಿರಾರು ಜನ ಬರುತ್ತಾರೆ. ಭಗ್ನಪ್ರೇಮ ಏಕಾಂತದಲ್ಲಿ ಜರುಗುತ್ತದೆ. ಅದನ್ನು ಆಚರಿಸಿಕೊಳ್ಳಲಿಕ್ಕೆ ಗೆಳತಿ/ಗೆಳೆಯ ಕೂಡ ಇರುವುದಿಲ್ಲ." ಇಂತಹ ಭಗ್ನಪ್ರೇಮದ ಏಕ ವ್ಯಕ್ತಿಯ ಯಾತನೆಯ ಸಂಭ್ರಮಾಚರಣೆ ಈ "L"
ಇದನ್ನು ಓದುವಾಗ ನನಗೆ ಇಳಿಜಾರಿನಲ್ಲಿ ಕಾಲಿಟ್ಟ ಅನುಭವವಾಯಿತು. ಒಮ್ಮೆ ಇದರ ಗುಂಗು ಹತ್ತಿ ಮತ್ತೆ ಅಂಚಿನ ತನಕ ತಾನೇ ಎಳೆದುಕೊಂಡು ಹೋಯಿತು. ಮೇಲೆ ಬರಲು ತುಂಬಾ ಒದ್ದಾಡಿದ್ದೇನೆ. ಹಾಗಾಗಿ "L" ಎಂದರೆ ಅಸಹಾಯಕತೆ.

ಲಕ್ಷ್ಮಣ ನೀಲಂಗಿ ಹೇಳ್ತಾನೆ, ಕವಿತೆ ಎಂದರೆ ಆತ್ಮಹತ್ಯೆಯೇ. ನನ್ನನ್ನು ನಾನು ಕೊಂದುಕೊಳ್ಳದೇ ಕವಿತೆ ಹುಟ್ಟುವುದಿಲ್ಲ. ನಾನು ಕಣಕಣವಾಗಿ ಸಾಯುತ್ತಾ ಕಣಕ ಕುಟ್ಟುತ್ತಾ ಹೋಗುತ್ತೇನೆ. ನನ್ನ ಹೆಣಗಳನ್ನು ನಾನು ನನ್ನ ಕವಿತೆಗಳಲ್ಲಿ ಕಂಡೆ. "L" ಎಂದರೆ ಪೋಸ್ಟ್ ಮಾರ್ಟಮ್.
ಓದುತ್ತ ಓದುತ್ತ, ಬಾಲ್ಯ ಸ್ನೇಹಿತನೊಬ್ಬ ತುಂಬಾ ದಿನದ ನಂತರ ಸಿಕ್ಕಾಗ ಹೇಳದೇ ಉಳಿದ ಅನೇಕ ವಿಷಯಗಳನ್ನು, ಮೊದಲೇ ಗೊತ್ತಿದ್ದ ಆದರೆ ಸ್ಮೃತಿ ಪಟಲದಲ್ಲಿ ಎಲೆಮರೆಯಾಗಿದ್ದ ಅನೇಕ ವಿಷಯಗಳನ್ನು ಒಟ್ಟಿಗೆ ನೆನಪಿಸುತ್ತಾ ಯಾವುದೋ ಮರೆತು ಹೋದ ಲೋಕಕ್ಕೆ ಕರೆದುಕೊಂಡು ಹೋಗತ್ತೆ. "L" ಎಂದರೆ ಆಪ್ಯಾಯಮಾನ.
"L"ನ ಸಾಲುಗಳು, "ಅದೇ ಸಂಜೆ ಸೂರ್ಯ ಮುಳುಗುತ್ತಿರುವ ಹೊತ್ತಲ್ಲಿ ಗುರುವಾಯನಕೆರೆಯ ದಂಡೆಯಲ್ಲಿ ಕೂತುಕೊಂಡು ನಾನೊಂದು ಪದ್ಯ ಬರೆದು ಅವಳ ಕೈಗಿಟ್ಟೆ. ಅದು ಬೀಸುಗಾಳಿಗೆತೇಲಿಕೊಂಡು ಹೋಗಿ ಕೆರೆಗೆ ಬಿತ್ತು. ಅದರಲ್ಲಿನ ಅಕ್ಷರಗಳ ಕರಗಿಹೋದವು. ಅವಳು ಅಳತೊಡಗಿದಳು. ಅಳಬೇಡ. ನಿನಗೆ ಮತ್ತೊಂದು ಪದ್ಯ ಬರೆದುಕೊಡುತ್ತೇನೆ ಅಂದೆ. ಬರೆದುಕೊಟ್ಟೆ. ಇದು ಅದಲ್ಲ ಅಂತ ಮತ್ತೆ ಅತ್ತಳು. ಅದೇ ಇದು ಅಂದೆ. ಅಲ್ಲ ಅಂತ ಅವಳು ಹಟಹಿಡಿದಳು. ಆಗ ಬರೆದದ್ದೇ ಬೇರೆ. ಇದೇ ಬೇರೆ ಅಂತ ಜಗಳವಾಡಿದಳು. ಅದೂ ಇದೂ ಒಂದೇ ಎಂದು ನಾನು ಎಷ್ಟೇ ವಾದಿಸಿದರೂ ಕೇಳದೇ ಅವಳು ನನ್ನ ಕವಿತೆಯ ಶ್ವೇತವರ್ಣದ ಕುದುರೆಯೇರಲು ನಿರಾಕರಿಸಿ ಹೊರಟುಹೋದಳು. ನಾನು ಮೊದಲು ಬರೆದ ಪದ್ಯವೂ ಆಮೇಲೆ ಬರೆದ ಪದ್ಯವೂ ಬೇರೆಯಾಗಿತ್ತು. ಆದರೆ ಅವಳು ಮೊದಲಿನದನ್ನು ಓದದೇ ಇದ್ದರೂ ಇದು ಬೇರೆ ಅಂತ ಹೇಗೆ ಹೇಳಿದಳು ಅನ್ನುವ ಪ್ರಶ್ನೆಗೆ ನನಗೆ ಉತ್ತರ ಸಿಗಲೇ ಇಲ್ಲ."
ಪದ್ಯ ಓದದೇ ಇದ್ದರೂ ವೇದ್ಯವಾಗುತ್ತದೆ ಅಂತ ನನಗೆ ಅನೇಕ ವರ್ಷಗಳ ನಂತರ ಅರಿವಾಯಿತು.
ಈ ಅರಿವು "L"
ತುಂಬಾ ಕಡೆ ಓದಿದ್ದೆ ಕಾವ್ಯ ಅಂದ್ರೆ ನಿನಗೆ ಒಂದು ರೀತಿ ಅರ್ಥವಾದದ್ದು ಇನ್ನೊಬ್ಬರಿಗೆ ಇನ್ನೊಂದು ರೀತಿ ಆಗಬಹುದು, ಮತ್ತೊಬ್ಬರಿಗೆ ಮತ್ತೊಂದು ರೀತಿ ಅರ್ಥವಾಗಬಹುದು. ಅದು ವಿಭಿನ್ನವಾಗಿ ಅರ್ಥವಾಗಲು ದೇಶ-ಕಾಲ, ಮನಸ್ಥಿತಿ ಮುಖ್ಯವಾಗತ್ತೆ. ಅಷ್ಟಕ್ಕೂ ಕಾವ್ಯ ಅರ್ಥ ಆಗಬೇಕಾಗಿಯೇ ಇಲ್ಲ. ಅರ್ಥ ಆಗಬಹುದು ಆಗದೇ ಇರಬಹುದು. ಇವತ್ತು ಓದಿ ಅರ್ಥ ಆದದ್ದು ಮುಂದೊಂದು ದಿನ ಓದಿದಾಗ ಮತ್ತೊಂತರಾ ಅರ್ಥವಾಗಬಹುದು. ಈ "ಅರ್ಥ" ಅನ್ನುವುದು ಇದೆಯಲ್ಲ ಕಾವ್ಯದ ವಿಷದಲ್ಲಿ ಮಾತ್ರವಲ್ಲ ಅದು ಜೀವನದಲ್ಲಿ ಕೂಡ ಇದೇ ಪಾತ್ರ ವಹಿಸುತ್ತದೆ.ಅಷ್ಟಕ್ಕೂ ಜೀವನ ಬೇರೆ ಕಾವ್ಯ ಬೇರೆ ಅಲ್ಲವಲ್ಲ. ಜೀವನೇ ಕಾವ್ಯ, ಕಾವ್ಯವೇ ಜೀವನ. ಹಾಗಾಗಿ ಕಾವ್ಯ ಮತ್ತು ಜೀವನ ಇಷ್ಟೇ ದಕ್ಕಿತು ಎಂದು ಬೇಸರಪಡಬೇಕಾಗಿಲ್ಲ. ಜಾಸ್ತಿ ದಕ್ಕಿತು ಅಂತ ಖುಷಿ ಪಡಬೇಕಾಗಿಲ್ಲ. ಇಲ್ಲಿರುವುದು ಅದೇ.
"L" ಎಂದರೆ ಸಿಕ್ಕಷ್ಟು ಶಿವಾಯನಮಃ.
ಈಗ ದಕ್ಕಿದ್ದು ಬರೆದದ್ದಕ್ಕಿಂತ ನೂರುಪಟ್ಟು. ದಕ್ಕಿದ್ದೆಲ್ಲ ಹೇಳುವುದು ಎಷ್ಟು ಕಷ್ಟ ಅಂತ ನಾನು ಇದನ್ನು ಓದಿದ ಮೇಲೆ ವೇದ್ಯಮಾಡಿಕೊಂಡೆ. ಇನ್ನೂ ಸಾವಿರಪಟ್ಟು ದಕ್ಕಲು ಬಾಕಿ ಇದೆ. ಮತ್ತೊಮ್ಮೆ ಮಗದೊಮ್ಮೆ ಓದಿದಾಗ ಬೇರೆ ಏನೋ ದಕ್ಕಬಹುದು. ಮರುಓದಿಗೆ ಕಾಯ್ತಾ ಇದ್ದಿನಿ.
ಇತ್ತೀಚೆನ ದಿನಗಳಲ್ಲಿ ನಾನು ಓದಿದ ಪುಸ್ತಕದಲ್ಲಿ ಈ "L" ಪುಸ್ತಕ ತುಂಬಾ ಕಾಡಿತು. ಜಾನಕಿ ಕಾಲಂ ಓದಿದಾಗ ತುಂಬಾ ಆಪ್ಯಾಯಮಾನ ಎನ್ನಿಸುತ್ತಿತ್ತು. ಜೋಗಿಯವರು ತಮ್ಮ ಅಂಕಣದಲ್ಲಿ ಕಾವ್ಯದ ಬಗ್ಗೆ ಬರೆದಿದ್ದನ್ನು ಓದುತ್ತಾ ಹೋದಂತೆ ಎಲ್ಲಿಯೋ ಕಳೆದು ಹೋದೆ ಎಂದೆನಿಸುತ್ತಿದ್ದು. ಅಂತಹ ಅನುಭವ ಮತ್ತೆ ಸಿಕ್ಕ ಖುಷಿ "L" ಓದಿದಾಗ.

No comments:

Post a Comment