Saturday, October 12, 2019

ಪದ ಕುಸಿಯೆ ನೆಲವಿಹುದು

ಅನಿತಾ ನರೇಶ ಮಂಚಿ ಅವರ ಬರವಣಿಯನ್ನು ಓದಿದಾಗ ನನಗೆ ಆಶ್ಚರ್ಯವಾಗುವ ಸಂಗತಿ ಎಂದರೆ ಅವರು ಬದುಕನ್ನು ನೋಡಿ, ಅನುಭವಿಸಿ, ಚಿತ್ರಿಸುವ ಪರಿ ಎಷ್ಟು ಚಂದವಾಗಿ ಇರ್ತದೆ ಅಂದರೆ ಇನ್ನೊಬ್ಬರಿಗೆ ಅಸೂಯೆ (V+) ಆಗುವಷ್ಟು. ಅವರ ಕಥೆಗಳಾಗಲಿ, ಅಂಕಣಗಳಾಗಲಿ, ಹಾಸ್ಯ ಲೇಖನಗಳಾಗಲಿ ಅಥವಾ ಪಾಕಶಾಸ್ತ್ರದ ಬಗೆಗಿನ ಬರಹಗಳಾಗಲಿ ಎಲ್ಲದರಲ್ಲಿಯೂ ಒಂದು ಹೊಸತನ ಇರುತ್ತದೆ, ತಾಜಾತನ ಇರುತ್ತೆ ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾದ ವಿಷಯಗಳಲ್ಲೂ ವಿಶೇಷತೆಯನ್ನು ಹುಡುಕಿ ಆನಂದಿಸುವ ಸುಂದರವಾದ ಮನಸ್ಥಿತಿ ಇರುತ್ತದೆ. 

"ಪದ ಕುಸಿಯೆ ನೆಲವಿಹುದು" ಇವರ ಮೊದಲ ಕಾದಂಬರಿ. ಒಂದೇ ಗುಟುಕಿನಲ್ಲಿ ಓದಿ ಮುಗಿಸುವ ಪುಸ್ತಕ ಇದಾದರೂ ಆಯ್ದುಕೊಂಡ ಕಥಾವಸ್ತು, ಅದನ್ನು ನಿರೂಪಿಸಿದ ರೀತಿ, ಒಳ ಹೂರಣದ ವಿನ್ಯಾಸ ಕಾದಂಬರಿ ಮುಗಿದ ಮೇಲೂ ಅದೇ ಗುಂಗಿನಲ್ಲಿ ತೇಲುವಂತೆ ಮಾಡುತ್ತದೆ. ಕಾದಂಬರಿಯ ಮುಖ್ಯಪಾತ್ರವಾದ "ಶಾಂತಿ"ಯ ಸ್ವಗತದಿಂದಲೇ ಇಡೀ ಕತೆ ನಿರೂಪಣೆಗೊಳ್ಳುತ್ತೆ. ಕಡುಬಡತನದಿಂದ ಕೂಡಿದ ತುಂಬು ಕುಟುಂಬದಲ್ಲಿ ಹಿರಿಯಳಾಗಿ ಜನಿಸಿದ ಶಾಂತಿ ಮನೆಯ ಅಷ್ಟೂ ಕೆಲಸವನ್ನು ಮಾಡುವ ಜವಾಬ್ದಾರಿ ಹೊತ್ತಾಗ ಮದುವೆ ಮಾಡಿದರೆ ಮನೆಯ ಕೆಲಸ ಮಾಡುವವರು ಯಾರು ಎಂದು ಹೆದರುವ ಅಪ್ಪ, ಎಲ್ಲ ಕೆಲಸವನ್ನು ತಾನು ಮಾಡಿದರೂ ಅದು ಮಗನ ಕಾಲ್ಗುಣ ಎಂದಾಗ ಅವಳಿಗಾಗುವ ಬೇಸರ, ಈ ಕಷ್ಟದಿದಂದ ಹೊರ ಬರಬೇಕೆಂಬ ತುಡಿತವಿರುವಾಗಲೇ ವಯೋಸಹಜವಾಗಿ ಹುಟ್ಟಿದ ಆಕರ್ಷಣೆ ನಂತರ ಪ್ರೀತಿಯಿಂದ ತಾನು ಬ್ರಾಹ್ಮಣಳಾಗಿದ್ದರೂ ಕೆಳಜಾತಿಯೆಂದು ಗುರುತಿಸಲ್ಪಡುವ ಮನೆಕೆಲಸ ಮಾಡುವ ಚನ್ನಪ್ಪುನೊಂದಿಗೆ ಓಡಿಹೋಗಿ ಇನ್ನೆಲ್ಲೋ ಜೀವನ ರೂಪಿಸಿಕೊಳ್ಳುತ್ತಾಳೆ. ಅಲ್ಲಿ ಚನ್ನಪ್ಪು ಕೀಳುಜಾತಿಯವನಾದರೂ ಅವನನ್ನು ಒಪ್ಪಿಕೊಂಡರೂ ಅವನ ಬಂಧುಗಳನ್ನು ಒಪ್ಪಕೊಳ್ಳಲು ಅವಳ ಮನಸ್ಸು ಕೇಳುವುದಿಲ್ಲ. ಇದು ಅವನ ಗಮನಕ್ಕೆ ಬಂದು ಅವನ ದೌರ್ಜನ್ಯಕ್ಕೂ ಇಡಾಗಿ ಒಂದು ಮಗುವಿನ ತಾಯಿಯಾದರೂ ಮನೆಬಿಟ್ಟು ಬರುತ್ತಾಳೆ. ನಂತರ ಸ್ವಂತ ಮನೆಯಲ್ಲೂ ತಿರಸ್ಕರಿಸಿ ಯಾರದೊ ಸಹಾಯದಿಂದ ಮಗಳನ್ನು ದತ್ತುಕೊಟ್ಟು ಮತ್ತೊಂದು ಮದುವೆಯಾಗುತ್ತಾಳೆ. ನಂತರ ಪೆದ್ದು ಗಂಡ, ಹುಟ್ಟಿದ ಮಗುವಿನ ಅಕಾಲಿಕ ಮರಣದಿಂದ ಬೆಸತ್ತು ಹಾಗೂ ಮನೆಯ ಯಜಮಾನನ ದುಷ್ಟ ಶಕ್ತಿ ಪ್ರತಿಭಟಿಸಿ ನಂತರ ಅದನ್ನೂ ಬಿಟ್ಟು ಇನ್ಯಾವುದೋ ತಿರುವಿನಿಂದ ಮಗಳನ್ನು ದತ್ತುಕೊಟ್ಟ ಮನೆಯವರ ಆಶ್ರಯದಲ್ಲಿ ಬೆಳೆದು ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾಳೆ ಶಾಂತಿ. ಇದಿಷ್ಟು ಕಥೆಯ ಬಾಹ್ಯಚಿತ್ರಣ. ಇದಿಷ್ಟು ಸಮಸ್ಯೆ ಗಂಡಸರಿಗೆ ಬಂದಿದ್ದರೆ ಅದನ್ನು ನಿವಾರಿಸಲು ಹಲವಾರು ದಾರಿಗಳು ಸಿಗುತ್ತಿದ್ದವು. ಆದರೆ ಹೆಣ್ಣಗೆ ಕಷ್ಟಸಾದ್ಯ. ಆದರೆ ಶಾಂತಿ ಗಟ್ಟಿಗಿತ್ತಿ ನೋವನ್ನು ನುಂಗಿಕೊಂಡು ಸಮಸ್ಯೆಗಳು ಇರುವುದೇ ಮನುಷ್ಯರಿಗೆ ಬರಲಿಕ್ಕೆ, ಅದನ್ನು ಪ್ರತಿಭಟಿಸಿಯಾದರೂ, ತಪ್ಪಿಸಿಕೊಂಡಾದರೂ ಮುಂದೆ ಸಾಗುವುದು ಮನುಷ್ಯನ ಗುರಿ. ಆದರೆ ಯಾವ ಸಮಯದಲ್ಲಿ ಪ್ರತಿಭಟಿಸಬೇಕು ಯಾವ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕು ಯಾವ ಸಮಯದಲ್ಲಿ ಸಮಸ್ಯೆಯನ್ನು ಅನುಭವಿಸಬೇಕು ಎನ್ನುವುದು ಕರಗತವಾಗಿ ಬಿಟ್ಚಾಗ ಸಮಸ್ಯೆಗಳು ಅಲ್ಟು ಸುಲಭವಾಗಿ ನಮ್ಮನ್ನು ಹಿಂಸಿಸುವುದಿಲ್ಲ. 
ಬದುಕಿಗಿಂತ ಸಿದ್ದಾಂತಕ್ಕೆ ಹೆಚ್ಚು ಬೆಲೆಕೊಡುವ, ಸಿದ್ದಾಂತವನ್ನು ಓಲೈಸುವ ಸಲುವಾಗಿ ಸಮಾಜವನ್ನು ಬೈಯ್ದು, ಹೆಣ್ಣುಮಕ್ಕಳ ಸಮಸ್ಯೆಗಳನ್ನು ತೋರಿಸಲು ಇಡೀ ಗಂಡು ಜನಾಂಗವನ್ನೇ ಕೀಳಾಗಿ ಕಂಡು, ಒಂದಿಡಿ ಪಂಗಡವನನ್ನು ಶತ್ರುವನ್ನಾಗಿ ಚಿತ್ರಿಸುವ, ಹಳಸಲು ಸ್ತ್ರೀವಾದವನ್ನು ಪ್ರತಿಪಾದಿಸುವವರ ಹತ್ತಿರ ಈ ಕಥಾವಸ್ತು ಸಿಕ್ಕಿದ್ದರೆ ಏನೆನೋ ಆಗಿಬಿಡುತ್ತಿತ್ತು. ಆದರೆ Anitha Naresh Manchi ಅವರು ಸಿದ್ದಾಂತಕ್ಕಿಂತ ಹೆಚ್ಚು ಬದುಕನ್ನು ಪ್ರೀತಿಸುವವರು ಎನ್ನುವುದು ಈ ಕಾದಂಬರಿಯನ್ನು ಓದಿದಾಗ ಗೊತ್ತಾಗುತ್ತದೆ. ಬಹುಷಃ ಜೀವನಪ್ರೀತಿ ಇದ್ದವರು ಮಾತ್ರ ಈ ತರಹದ ಕೃತಿಯನ್ನು ರಚಿಸಲು ಸಾದ್ಯ. ಅವರಿಗೆ ಕಾದಂಬರಿ ಬರೆದು ಅದರಿಂದ ಇನ್ನೇನೋ ಸಾದಿಸುತ್ತೇನೆ ಎನ್ನುವ ಕೆಟ್ಟ ಆಲೋಚನೆಗಳು ಇದ್ದಂತಿಲ್ಲ. ಹಾಗೇ ಇರಬೇಕು. ಕಾದಂಬರಿಕಾರರ ಮುಖ್ಯ ದ್ಯೇಯ "ಸಮಾಜದಲ್ಲಿ ಆಗುಹೋಗುವ ವಿಷಯಗಳ್ನು ತನ್ನ ಅನುಭವದ ಚೌಕಟ್ಟಲ್ಲಿ ಹೊಸೆದು ಅದು ಓದುಗರ ಅನುಭವಕ್ಕೆ ಬರುವಂತೆ ಮಾಡುವುದು" ಇದು ಈ ಕಾದಂಬರಿಯಲ್ಲಿ ದಟ್ಟವಾಗಿ ಗೋಚರಿಸುತ್ತದೆ. ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಎಷ್ಟೊಂದು ಭಾವತೀವ್ರತೆಯನ್ನು ಪಡೆಯಬಹುದಾಗಿದ್ದ ಇಲ್ಲಿನ ಕಥಾ ನಿರೂಪಣೆ ಸಹಜವಾಗಿ ಸಾಗುತ್ತಾ ಹೋಗುತ್ತದೆ. ಇದು ಬರವಣಿಯಲ್ಲಿ ಮಾಗಿದವರಿಗೆ ಮಾತ್ರಸಾದ್ಯ. ಒಟ್ಟಿನಲ್ಲಿ ಕಾದಂಬರಿ ಇಷ್ಟವಾಯಿತು. Malini Guruprasanna ಅವರ ಚಂದದ ಮುನ್ನುಡಿ ಕಾದಂಬರಿಯನ್ನು ಇನ್ನಷ್ಟು ಸೊಗಸಾಗಿಸಿದೆ. 
ನಾನು ಮೊದಲು ಇವರ ಲೇಖನಗಳನ್ನು ಓದಿದ್ದು ವಿಜಯವಾಣಿ ದಿನಪತ್ರಿಕೆಯಲ್ಲಿ, ನಂತರ ಫೇಸ್'ಬುಕ್, ಬ್ಲಾಗ್’ನಲ್ಲಿ ಇವರ ಕತೆ ಲೇಖನಗಳನ್ನೆಲ್ಲ ಓದಿದ್ದೆ. ನಂತರ ಅವರ ಪುಸ್ತಕಗಳನ್ನೂ ತರಿಸಿ ಓದಿದ್ದೆ. ಆದರೆ ಇದೊಂದು ಇವೆಲ್ಲದಕ್ಕಿಂತ ವಿಭಿನ್ನವಾದ ಕೃತಿ. ಮುಂದೆ ಇವರಿಂದ ಇದಕ್ಕಿಂತ ಭಿನ್ನವಾದ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.

No comments:

Post a Comment