Saturday, October 12, 2019

ಮಳಿ ಅನ್ನೂದು ಪೊಲೀಸ್ರನ್ನು ಕಳ್ಳನ ಮಾಡಿ ಇಟ್ಟಿತಲ್ಲಪಾ

ಈ ಮಳಿಗೆ ಪೊಲೀಸರಿಗೂ ಆಗಿ ಬರಾಂಗಿಲ್ಲ ಅಂತ ಕಾನ್ತೈತಿ. ಯಾವ ಜನ್ಮದಾಗ ಇಬ್ಬರಿಗೂ ಎನ್ ಇರ್ಷೆ ಇತ್ತ ಎನೋ, ಈ ಭವ ಬಂಧನಗಳನ್ನೆಲ್ಲ ಕಳ್ಕೊಂಡ ಮಳೆ ಅನ್ನೊದು ಮುಗಲಾಗ ಹೋಗಿ ಕುಂತ್ರ, ಈ ಪೊಲೀಸ್ ಅನ್ನಾಂವ ಇನ್ನೂ ಎನೋ ಮಾಡಬೇಕಾಗಿ ಉಳ್ದೈತಿ ಎನೋ ಅದಕ ಇನ್ನೂ ಭೂಮು ಮ್ಯಾಲ ಉಳ್ಕೊಂಡಾನ. ಆದ್ರ ಮಳಿ ಅನ್ನೂದು ಬಂಧನಗಳನ್ನ ಕಳ್ಕೊಂಡ್ರೂ ಡ್ಯೂಟಿ ಒಳಗ ಅವಾಗವಾಗ ಬಂದ ಕಾಡ್ತಿರ್ತೈತಿ. ಅದರಾಗ ಟ್ರಾಫಿಕ್ ಪೊಲೀಸರಿಗಂತೂ ಮಳಿಗಿ ಅವ್ರಿಗಿ ಅತ್ತಿ ಸೊಸಿ ಸಂಬಂಧ ಇದ್ಹಾಂಗ್. ಅತ್ತಿ ಮಳಿ ಆದ್ರ ಪೊಲೀಸರು ಸೊಸಿ ಇದ್ಹಾಂಗ್. ಡ್ಯೂಟಿ ಮಾಡೂ ಸಂದರ್ಭದೊಳಗ ಹೊರಗಡೆ ಎಲ್ಲಕಡೆಗೂ ತಂಪ ವಾತಾವರಣ ಇದ್ರೂ ಪೊಲೀಸರ ಮನಸ್ಸಿನೊಳಗ ಕುದಿತಿರ್ತೈತಿ. ಆದ್ರ ಎಷ್ಟ ಸಿಟ್ಟ ಬಂದ್ರೂ ತೊರ್ಸಕೊಳ್ಳುವಂಗಿಲ್ಲ. ಎಲ್ಲಾ ಹೊಟ್ಟ್ಯಾಗ್ ಹಾಕೊಂಡ್ ಡ್ಯೂಟಿ ಮಾಡ್ಬೇಕು.
          ಮಳಿಗಿ ಪೊಲೀಸರಿಗೂ ಹ್ಯಾಂಗ್ ಹಾವು ಮುಂಗಲಿ ಸಂಬಂಧ ಅಂತ ಕೇಳಬಹುದು. ಮಳಿ ಬಂದ್ರಂತೂ ಟ್ರಾಪಿಕ್ ಜಾಮ್ ತುಂಬಿ ತುಳಕತೈತಿ. ಅದರಾಗೂ ದೊಡ್ಡದೊಡ್ಡ ಸರ್ಕಲ್ ಜಾಗಾ ಒಳಗ ಜಾಸ್ತಿ.  ಮಳಿ ಬಂತು ಲಗೂ ಮನೆಗೆ ಹೊಗೂನು ಅನ್ನು ಮಂದಿ ಒಂದಕಡೆಯಾದ್ರ, ಮುಂದಿನ ಹಾದಿ ಕಾನ್ಲಾರ್ದ ಮಂಜನಾಗ ಅಜಮಸ ಗಾಡಿ ಹೊಡೆಯೂ ಮಂದಿ ಇನ್ನೊಂದ ಕಡೆ. ರೊಡ್ ಎಲ್ಲಾ ತುಂಬಿ ಎಲ್ಲಿ ತೆಗ್ಗು-ದಿಣ್ಣೆ ಅದಾವು ಎಲ್ಲಿ ಡಿವೈಡರ್ ಅದಾವು ಅನ್ನೂದ ಸೈತ್ ಕಾಣುದಿಲ್ಲ.

ಇವು ಗಾಡಿಗೊಳ ಗತೀ ಆದ್ರ, ಇನ್ನ ಮಂದಿ ಕಥೀ ಹೆಳೂದ ಬ್ಯಾಡ. ಕೆಲವೊಬ್ರು ಮಳಿ ಬಂದಾಗ ಆಸರೆಗೆ ನಿಲ್ಲಾಕ ಓಡೂದು ಒಂದ ಕಡೆ ಆದ್ರ, ಇನ್ನೊಬ್ರು, ಮನೀಗೆ ಹೊಗಾಕ್ ಯಾವ್ದ ನಿಂತಿರ್ತೈತಿ ಆ ಬಸ್ ಒಳಗ ಕುಂಡ್ರಾಕ ಓಡು ಮಂದಿ ಇನ್ನೊಂದ ಕಡೆ. ಈ ಎರಡೂ ತರಾ ಮಂದಿಗೆ ರೋಡ್ ಒಳಗಡೆ ಬರೂ ಬ್ಯಾರೆ ಗಾಡಿಗಳು ಕಾಣೂದೇ ಇಲ್ಲ. ಒಟ್ರಾಸಿ ಹೋಗೂದು, ಒಟ್ಟ ಆಸರ ಸಿಕ್ಕರ ಸಾಕ ಇವ್ರಿಗಿ.
ಇದನ್ನೆಲ್ಲಾ ನೋಡ್ಕೊಂತ ರೊಡನ್ಯಾಗ್ ನಿಂತ ಎಲ್ಲಾರ್ನೂ ಸಂಬಾಳ್ಸಾಕ್ ಪೊಲೀಸರಿಗಂತೂ ಸಾಕ ಸಾಕಾಗಿ ಹೋಗತೈತಿ. ಪೊಲೀಸರಿಗಿ ಹತ್ತ ಕೈ, ನಾಲ್ಕೈದ ಬಾಯಿ ಇದ್ರ ಆ ಮಾತ ಬ್ಯಾರೆಪಾ, ಎರಡ ಕೈ, ಒಂದ ಬಾಯಿಯೊಳಗ ಎಲ್ಲಾರ್ನೂ ಸಂಬಾಳ್ಸಿ ಕಳ್ಸಬೇಕು. ಹಂತಾದ್ರಾಗ ಟ್ರಾಪೀಕ್ ಜಾಮ್ ಆದ್ರ ಇದನ್ನೆಲ್ಲ ಎದಕ್ ಅಂತ ಯೋಚನೆ ಮಾಡೂದ ಅಲ್ಲ ಕೆರ್ಕೊಳಾಕೂ ಪುರ್ಸತ್ ಇರಲ್ಲ.
ಇನ್ನ ಯಾವ ಟೈಮ್ ಒಳಗ ಯಾರಿಗಾದ್ರೂ ಫೈನ್ ಹಾಕಿದ್ರ ಹಂತಾವ್ರಿಗಿ ಇ ಮಳಿ ಹತ್ತಿದಾಗ ಚಾನ್ಸ್ ಸಿಗ್ತೈತಿ. ಸುಮ್ಮ ಸುಮ್ಮನ ಹಾರ್ನ್ ಹಾಕುದು, ಪೊಲೀಸರ ಮುಂದ ಹೆಲ್ಮೆಟ್ ತಗದ ಒಟ್ರಾಸಿ ಹೊಗೂದು. ಕೆಲವೊಬ್ರಂತೂ ಇದ ಚಾನ್ಸ್ ಅಂತ ದೂರಿಂದ ಕೆಸರ ಮೈಮ್ಯಾಲ ಒಗದ ತಮ್ಮ ಅತೃಪ್ತ ಆತ್ಮಗಳನ್ನ ಸಂತೃಪ್ತ ಮಾಡ್ಕೋತಾರು.
ಇನ್ನೊಂದ ಮಾತ ಹೇಳಬೇಕ ಅಂದರ ಪೊಲೀಸರು ಅಂದ್ರ ಯಾವತ್ತೂ ಟಿಪ್-ಟಾಪ್ ಟ್ರೆಸ್ ಹಾಕೊಂಡ ಇರ್ಬೇಕ್ ಆಗ್ತೈತಿ. ರೋಟ್ ಒಳಗ ಒಬ್ಬ ಪೊಲೀಸ್ ಯೂನಿಪಾರ್ಮ್ ಒಳಗ ನಡ್ಕೊಂಡ ಹ್ವಂಟ್ರ ಎಲ್ಲರ ಕಣ್ಣ ಅವ್ರಮ್ಯಾಲ ಇರ್ತಾವು. ಮತ್ತ ಡಿಸಿಪ್ಲೇನ್ ಇಲಾಖೆ ಆದ್ದರಿಂದ ಯಾವತ್ತು ಕ್ಲೀನ್ ಬಟ್ಟೆ, ಐರನ್ ಮಾಡಿ ಕಡಕ್ ಇಟ್ಟಿರಬೇಕಾಗ್ತೈತಿ. ಬೆಳಗ್ಗೆ ಎದ್ದ ಗರಿಗರಿ ಡ್ರೆಸ್ ಹಾಕೊಂಡ ಡ್ಯೂಟಿಗೆ ಹೋಗ್ತಿರ್ಬೇಕಾದ್ರ ಮಳಿ ಬಂದ್ರಂತೂ ಆ ಪೊಲೀಸರ ಮೋತಿ ನೋಡೂದ ಬ್ಯಾಡ. ರೊಡ್ ಒಳಗ ಯಾವ್ದರೆ ಗಾಡಿ ಹಾದ್ ಹ್ವಾದ್ರ ಸಿಡದ ಒಮದ ಹನಿ ಕಲೀ ಬಿದ್ದ ತೆಲ್ಯಾಗಿನ ಬಿಳಿಕೂದ್ಲಿನಂಗ ಅದ ಎದ್ದ ಕಾನ್ತಿರತೈತಿ.
ಇವೆಲ್ಲ ಟ್ರಾಫೀಕ್ ಟ್ಯೂಟಿಯೊಳಗಿನ ಸಮಸ್ಯೆ ಆದ್ರ, ಇನ್ನ ತನಿಖೆ ಸಮಯದೊಳಗ ಮಳಿ ಅನ್ನೂದು ಬಾಳ ತ್ರಾಸ್ ಕೊಡ್ತದ. ಒಪನ್ ಎರಿಯಾದೊಳಗ ಯಾವ್ದರೆ ಕೊಲೆ, ಕಳ್ಳತನ ಆಗಿ ಬಿಟ್ರಂತೂ ಸಾಕ್ಷಿ ಉಳಕೊಳ್ಳೂದು ಬಾಳ ದುರ್ಲಬ. ಮೊದಲ ಅಲ್ಲಿರುವ ಪಿಂಗರ್ ಪ್ರಿಂಟ್ ಆರಿ ಹ್ವಾದ್ರ, ಇನ್ನೊಂದ ಅಪರಾಧ ನಡೆದ ಗಟೆಯೊಳಗಿನ ವಾಸನೆ ಹಾರಿ ಹೋಗಿ ನಮ್ಮ ಪೊಲೀಸ್ ನಾಯಿಗಳು ಬಂದು ಮುಸು ಮುಸು ನೋಡಿ ಅಲ್ಲೆ ನಿಲ್ತಾವು. ಇನ್ನ ರಕ್ತ ಬಿದ್ದಿದ್ರಂತೂ ಮುಗದ ಹೊತ. ನಾಳಿ ಕೊರ್ಟ್ ಒಳಗ ಏನ್ ಸಾಕ್ಷಿ ಕೊಡೂನು ಪಾ ಶಿವನ ಅಂತ ದಂಗ ಬಡ್ದಾವ್ರ ತರಾ ಕುಂದ್ರಬೇಕಾಗ್ತದ. ಅದಕ್ಕ ಪೊಲೀಸ್ರು ದೇವ್ರ ಗತ್ರ ಬೇಡೂದು ಎರಡ ವಿಚಾರ. ಇವತ್ತ ನಮ್ಮ ಊರನ್ಯಾಗ ಎನೂ ಕೆಟ್ಟದ ಆಗಬಾರ್ದಪಾ ಶಿವನ ಒಂದ ವೆಳೇ ಆದ್ರೂ ಅವಾಗ ಮಳಿ ಬರ್ಬಾರ್ದಪಾ ಅಂತ. ಮಳಿ ಅನ್ನೂದು  ಒಂದ ಕಡೆ  ನಮ್ಮನ್ನ ಒದ್ದೆ ಮಾಡಿ ಮಳಿ ತ್ರಾಸ್ ಕೊಟ್ರ ಇನ್ನೊಂದು ಥಂಡಿ. ನೈಟ್ ಡ್ಯೂಟಿ ಹ್ವಾದಾಗಂತೂ ದೇವ್ರ ಭೇಟಿ ಆಗ್ತಾನು. ರೆನ್ ಕೊರ್ಟ್ ಹಾಕೊಂಡ ಮೈಯೆಲ್ಲ ನೀರ್ ಸೊರಿಸಿಕೊಂಡ ಒಂತರಾ ಒಡದ ಪುಡಬಲ್ ಗಡೀಗಿ ಆಗಿರ್ತಿವಿ. ಮಳಿ ನಿಂತ ಮ್ಯಾಲ ಅದನ್ನ ತಗಿಯೂವಂಗಿಲ್ಲ, ಹಂಗ ಹಾಕೊಂಡ ಇರೂವಂಗಿಲ್ಲ.
ಒಮ್ಮಿ ಎನ್ ಆಗಿತ್ಪಾ ಅಂದರ, ಪೊಲೀಸ್ ಒಳಗ ರಾತ್ರಿ ಕಳ್ಳತನ ತಡೆಗೆಟ್ಟಾಕ ಯೂನಿಪಾರ್ಮ ಒಳಗ ಹ್ವಾದ್ರ ಡೌಟ್ ಬರ್ತಯತಿ ಅಂತಹೇಳಿ ಮಪ್ತಿ ಡ್ರೆಸ್ ಹಾಕೊಂಡ ರಾತ್ರಿ ರೌಂಡ್ಸಗಿ ಹೋಗೂವ ಪ್ರಸಂಗಗಳು ಇರ್ತಾವು. ಅದು ಯಾರಿಗೂ ಗೊತ್ತ ಆಗುವಂಗಿಲ್ಲ. ಒಮ್ಮೆ ಎಲ್ಲಾರು ಹೊಗೂದು ಅಂದ್ರ ಹೊಗೂದನ. ಒಮ್ಮೆ ಹಿಂಗ್ ಹ್ವಾದಾಗ ಎಲ್ಲಾರೂ ಒಂದಕಡೆಗೆ ಇರೂದು ಬ್ಯಾಡ, ಬ್ಯಾರೆ ಬ್ಯಾರೆ ಕಡೆ ಮರೀಗಿ ನಿಂತ ಯಾರರೆ ಡೌಟ್ ಬರೂ ಜನಾ ತಿರಗಾಡ್ತಿರ್ತಾರು, ಎನರೆ ಮಾಹಿತಿ ಸಿಕ್ರ ಪಟ್ಟಂತ ಎಲ್ಲಾರು ಅಲ್ಲಿ ಬರ್ಬೇಕ ಅಂತ ಹೇಳಿ ಚಲ್ಲಾಪಿಲ್ಲಿ ಆಗಿ ರೌಂಡ್ಸ್ ಮಾಡಾಕ ಸುರು ಮಾಡಿದ್ವಿ. ರಾತ್ರಿ 2 ಗಂಟೆ, ಒಮ್ಮಿಲೆ ಮಳಿ ಬರಾಕ್ ಸುರುಮಾಡಿತು. ಛತ್ರಿ ಸೈತ್ ತಂದಿರ್ಲಿಲ್ಲ. ಮಳಿ ನಿಲ್ಲೂತನಕಾ ಆಸರಕ್ಕ ನಿಂತ್ರ ಆತೂ ಅಂತ ಅಲ್ಲೆ ಇದ್ದ ಯಾರದೋ ಗೇಟ್ ಸರಿಸಿ ಅಲ್ಲೆ ಮನೀ ಆಸರಕ್ಕ ನಿಂತಿದ್ದೆ. ನಿಂತ ಇನ್ನೂ 15 ನಿಮಿಷ ಆಗಿರ್ಲಿಲ್ಲ ಕಂಟ್ರೊಲ್ ರೂಮ್ ನಿಂದ ವಯರ್ ಲೆಸ್ ಮೆಸೆಜ್ ಬಂತು “ ಇಂತಿಂತ ಎರಿದೊಳಗ ಕಳ್ಳರ ಬಂದಾರು ಅಂತ 100 ನಂಬರಿಗೆ ಕಾಲ್ ಬಂತೈತಿ ಎಲ್ಲಾರೂ ಆ ಕಡೆ ಗಮನ ಕೊಡ್ರಿ, ಕಳ್ಳ ಯಾವ್ದ ಕಾರಣಕ್ಕೂ ತಪ್ಪಿಸ್ಕೊಳ್ಳಬಾರ್ದು” ಅಂತ. ಎನಪಾ ಇದು ಹಿಂತಾ ವ್ಯಾಳೆಯೊಳಗ ಈ ಕಳ್ಳ ಬರ್ಬೇಕಾ, ಈ ಮಳಿ ಬ್ಯಾರೆ ನಿಂತಿಲ್ಲ. “ನೋಡೆ ಬಿಡೂನು ತೊಸ್ಕೊಂಡ್ರ ತೊಸ್ಕೊಳ್ಳಿ, ಒಬ್ಬ ಕಳ್ಳರೆ ಸಿಗ್ತಾನು”  ಅಂತ ಹೊರಗ ಬಂದ ಎಲ್ಲಾ ಕಡೆ ಟಾರ್ಚ್ ಹಾಕಿ ಹುಡ್ಕತಿರಬೇಕಾದ್ರ ಎಲ್ಲಾ ಕಡೆ ರೌಂಡ್ಸ್ ಇರೂ ನಾಲ್ಕೈದ್ ಜೀಪ್, ಐದಾರ್ ಸೈಕಲ್ ಮೊಟರ ಒಳಗ ನಮ್ಮ ಪೊಲೀಸರು ಬಂದ ಗರೀಷ್ಠ ಬಲ ಇಟ್ಕೊಂಡು ಅರ್ದ ತಾಸ ಹುಡ್ಕಿದ್ರೂ ಕಳ್ಲ ಸಿಗ್ಲೇ ಇಲ್ಲ. ಇನ್ನೊಮ್ಮಿ ಯಾವ್ ಎರಿಯಾ ಅಂತ ಕನ್ಪರ್ಮ ಮಾಡ್ಕೊಳ್ಳೂನು ಅಂತ ಕಂಟ್ರೋಲ್ ರೂಮ್ ಗೆ ಪೋನ್ ಮಾಡಿ ವಿಚಾರ ಮಾಡಿದಾಗ ಅವ್ರು ಒಂದ ಮೊಬೈಲ್ ನಂಬರ್ ಕೊಟ್ಟು ಹಿಂತಾವ್ರು ಪೋನ್ ಮಾಡಿದ್ರು, ಅವ್ರನ್ನ ಪೊನ ಮಾಡಿ ಕೇಳಿದ್ರ ಮಾಹಿತಿ ಸಿಗಬಹುದು ಅಂದಾಗ, ನಾವು ಆ ನಂಬರಿಗೆ ಪೊನ್ ಮಾಡಿ ವಿಚಾರ ಮಾಡಿ ಅವ್ರ ಮನಿಗಿ ಹೊದಾಗ, ನಾ ಆಸರೆಗೆ ನಿಂತ ಮನೆ ಅದು. ಎಲಾ ಇವ್ನ್ ಇಷ್ಟೊತನ್ಕಾ ಇಲ್ಲೆ ಇದ್ನಿ ಎಲ್ಲೆಂಗ ಕಳ್ಳ ಬಂದಪಾ ಅಂತ ಬಾಗಲಾ ತಗಿಸಿ ವಿಚಾರ ಮಾಡಿದಾಗ “ ಇಲ್ಲಿ ಅರ್ದಾ ತಾಸ ಹಿಂದ ಯಾರೊ ಬಂದ ನಿತಿರ್ದು, ಅದಕ್ಕ ಡೌಟ್ ಬಂದ 100 ನಂಬರಿಗೆ ಪೋನ್ ಮಾಡಿದೆ ಅಂದಾಗ ನನಗ ನಗಬೆಕೋ ಅಳಬೆಕೋ ಅಂತ ಗೊತ್ತ ಆಗ್ಲಿಲ್ಲ. ಯಾಕಂದ್ರ ಅರ್ದತಾಸ ಹಿಂದ ನಾನ ನಿಂತಿದ್ದೆ, ನನ್ನ ನೋಡಿ ಕಳ್ಳ ಅನ್ಕೊಂಡು ಅವ್ರು 100 ನಂಬರಿಗೆ ಪೊನ್ ಮಾಡಿದ್ರು.  ಈ ಮಳಿ ಅನ್ನೂದು ಪೊಲೀಸ್ರನ್ನು ಕಳ್ಳನ ಮಾಡಿ ಇಟ್ಟಿತಲ್ಲಪಾ ಅಂತ ಯೊಚ್ನೆ ಮಾಡ್ತಿರಬೇಕಾದ್ರ ನಮ್ಮ ಎಲ್ಲಾ ಪೊಲೀಸರು ನನ್ನನ್ನ ಕಳ್ಳನ ತರಾ ನೋಡ್ಕೊಂತ ಮನೀಗಿ ಹ್ವಾದ್ರು .
          ಇಷ್ಟೆಲ್ಲಾ ಆದ್ರೂ ನಮಗ ಮಳಿ ಅನ್ನೂದು ಬೇಕು. ನಾವು ಪೊಲೀಸರು ಅನ್ನೂಕ್ಕಿಂತ ಸಮಾಜದಾಗ ಇರಾವ್ರು ಅನ್ನುದು ಯೊಚನೆ ಮಾಡಬೇಕಾಗ್ತೈತಿ.  ನೀರು ಅನ್ನೂದು ಜೀವಜಲ. ಈ ಪ್ರಪಂಚದಾಗ ನೀರು ಇಲ್ಲಾಂದ್ರ ಯಾವ್ದೂ ಕಲ್ಸ ಆಗೂದಿಲ್ಲ. ನಮಗ ಎಷ್ಟ ತ್ರಾಸ ಆದ್ರು ಸಹಿಸ್ಕೊತೀವಿ. ಆದ್ರೂ ಮಳಿ ಬರ್ಲಿ. ಅದಕ್ಕ ನಮ್ಮ ಕಡೆ ಹಿರ್ಯಾರು ಹೇಳ್ತಾರು ಮಳಿ ಆದ್ರ ಕೆಟ್ಟಲ್ಲ, ಮಕ್ಕಳ ಉಂಡ್ರೂ ಕೆಟ್ಟಲ್ಲ. ಮಲಿ ಬಂದ್ರ ನಮ್ಮ ಅಂತರಾಳದ ಸೆಲ್ಯೂಟ್ ಅದಕ್ಕ ಇದ್ದ ಇರ್ತದ.
-ಶ್ರೀಶೈಲ ಮಗದುಮ್ಮ .

No comments:

Post a Comment