Saturday, October 12, 2019

ಕಂಬಾರರ ಶಿವರಾತ್ರಿ ಹಾಗೂ ಲಂಕೇಶರ ಸಂಕ್ರಾಂತಿ



ಚಂದ್ರಶೇಖರ ಕಂಬಾರರ ಶಿವರಾತ್ರಿ
ಕಲ್ಯಾಣ ಕ್ರಾಂತಿಯ ಸಮಯದಲ್ಲಿ ನಡೆದಿರುವ ಘಟನೆಯಾದ ಮಧುರಸ ಹಾಗೂ ಹರಳಯ್ಯನ ಗಲ್ಲು ಶಿಕ್ಷೆಯ ಮರುದಿನವನ್ನು ಕಲ್ಪಿಸಿ ಒಂದು ರಾತ್ರಿಯ ಸನ್ನಿವೇಶದಂತೆ ಚಿತ್ರಿಸಿ ಅದರಿಂದ ಇಡೀ ಕಲ್ಯಾಣ ಕ್ರಾಂತಿಯ ಸುಮಾರು ಘಟನೆಗಳು ಕಣ್ಣಮುಂದೆ ಬರುವಂತೆ ಮಾಡುವ ನಾಟಕ ಶಿವರಾತ್ರಿ. ನಿಜವಾಗಿಯೂ ವಿಭಿನ್ನವಾದ ದೃಷ್ಟಿಕೋನದಿಂದ ರಚಿತವಾದರೂ, ಒಂದು ಬೃಹತ್ ಕಾದಂಬರಿ ಸಿನೇಮಾ ಆಗಿ ಮೂರು ಗಂಟೆಯಲ್ಲಿ ಇಡೀ ಕಾದಂಬರಿಯನ್ನು ಪ್ರಸ್ಥುತ ಪಡಿಸಿದರೂ ಇನ್ನೊಮ್ಮೆ ಆ ಕಾದಂಬರಿಯನ್ನು ಓದಬೇಕು ಎನ್ನುವಂತೆ ಮಾಡುವ ಧಾಟಿಯಂತೆ ಈ ಕಾದಂಬರಿ ಭಾಸವಾಗುತ್ತದೆ. 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ನಡೆದ ಅನೇಕ ಸಂಗತಿಗಳು ಇತಿಹಾಸದಿಂದ ನಮಗೆ ಸ್ಪಷ್ಟವಾಗಿರದಿದ್ದರೂ ಕಂಬಾರರ ಈ ನಾಟಕವನ್ನು ಓದುತ್ತಿದ್ದಂತೆ ನಾವು ಒಮ್ಮತಕ್ಕೆ ಬಾರದಿದ್ದರೂ ಒಂದು ಕಥಾ ಹಂದರವಾಗಿ ಅದನ್ನು ಓದುಗ ಸ್ವೀಕರಿಸಲೇ ಬೇಕಾಗುತ್ತದೆ. ಈ ಕಥಾರೂಪದ ನಾಟಕ ಹಲವು ಕಡೆಗಳಲ್ಲಿ ನಾಟಕಿಯತೆಯ ರೂಪವನ್ನು ಪಡೆದುಕೊಂಡರೂ ಹಲವಾರು ವಾಸ್ತವ ಅನ್ನಿಸುವಂತ ಘಟನೆಗಳನ್ನು ಹಾಗೂ ವಿಚಾರಗಳನ್ನು ಹೇಳುವಲ್ಲಿ ನಾಟಕ ಯಶಸ್ವಿಯಾಗಿದೆ.
ಈ ನಾಟಕದ ಹೆಚ್ಚಿನ ಭಾಗ ನಡೆಯುವುದು ಸಾವಂತ್ರಿ ಎನ್ನುವ ಸೂಳೆಯ ಮನೆಯಲ್ಲಿ. ಈ ನಾಟಕದಲ್ಲಿ ಗಮನಹರಿಸಬೇಕಾದ ಇನ್ನೊಂದು ಅಂಶ ಎಂದರೆ ಇಲ್ಲಿಬಳಸಿದಂತಹ ಪ್ರತೀಕಗಳು. ಸಾಹಿತ್ಯದಲ್ಲಿ ಪ್ರತೀಕಗಳು ಲೇಖಕನ ವಿದ್ವತ್ತಿನ ಹಾಗೂ ಕಥಾ ತಂತ್ರ ರಚಿಸುವ ಜಾಣ್ಮೆಯ ಪ್ರತಿರೂಪ ಎನ್ನುತ್ತದೆ ಭಾರತಿಯ ಕಾವ್ಯ ಮೀಮಾಂಸೆ. ಅದಂತೆ ಈ ನಾಟಕದ ಪಾತ್ರಗಳಾಗಿರುವ ಮುಗ್ಧ ಸಂಗಯ್ಯ ಹಾಗೂ ಹುಚ್ಚಿಯ ಪಾತ್ರ. ಮುಗ್ಧ ಸಂಗಯ್ಯ ಸಾಕ್ಷ್ಯಾತ್ ಕೂಡಲ ಸಂಗಮನನ್ನೇ ಪ್ರತಿನಿಧಿಸಂತಿದ್ದರೆ ಹುಚ್ಚಿಯ ಪಾತ್ರ ನಗರದೇವತೆಯ ನಿದರ್ಶನವಾಗಿರುವುದು ಗಮನಿಸಬಹುದು. ಇವೆರಡೂ ಪಾತ್ರಗಳು ಹಾಗೂ ಸೂಳೆ ಸಾವತ್ರಿಯ ಪಾತ್ರ ಬಸವಣ್ಣ ಬಿಜ್ಜಳನ ಪಾತ್ರದಂತೆಯೇ ಮುಖ್ಯವಾಗುತ್ತದೆ. ಅದರಂತೆ ಕಾಮಾಕ್ಷಿ, ದಾಮೋದರ, ಕಳ್ಳ ಚಿಕ್ಕಯ್ಯನ ಪಾತ್ರಗಳು ನಾಟಕದ ಮೆರಗನ್ನು ಹೆಚ್ಚಿಸಿವೆ. 

ಈ ನಾಟಕದಲ್ಲಿ ಇಷ್ಟವಾಗುವ ಪ್ರಸಂಗಗಳು ಹಲವಾರಿದ್ದರೂ ಈ ಒಂದು ಘಟನೆ ತುಂಬಾ ಮನಸ್ಸಿಗೆ ನಾಟಿತು. ಸೂಳೆ ಸಾವಂತ್ರಿ ತಾನು ಸೂಳೆತನದಲ್ಲೂ ಧರ್ಮವನ್ನು ಅನುಸರಿಸುತ್ತೇನೆ ಎನ್ನುವ ಮಾತುಗಳನ್ನಾಡಿದಾಗ ಬಿಜ್ಜಳನು ಸೂಳೆತನವನ್ನೂ ಸಮರ್ಥಿಸಿಕೊಳ್ಳುವಿಯಲ್ಲೇ ನಿನಗೆ ನಾಚಿಕೆಯಾಗುವುದಿಲ್ಲವಾ? ಎಂದಾಗ ಸಾವಂತ್ರಿ ಕೊಟ್ಟ ಉತ್ತರ-
“ಶ್ರೀಮಂತನೊಬ್ಬ ಕದ್ದ ಹಣದಿಂದ ಶ್ರೀಮಂತನಾದ ಬಗ್ಗೆ ಕೊಚ್ಚಿಕೊಂಬಾಗ, ಜನರನ್ನು ಕೊಂದು ರಾಜನಾದವನು ತನ್ನ ವಿಜಯಗಳನ್ನು ಕೊಚ್ಚಿಕೊಂಡಾಗ, ಭ್ರಷ್ಟಾಚಾರದಿಂದ ಮೇಲೇರಿದ ಅಧಿಕಾರಿ ತನ್ನ ಅಧಿಕಾರದ ಬಗ್ಗೆ ಕೊಚ್ಚಿಕೊಂಡಾಗ – ನಾಚಿಕೊಳ್ಳುವರೇ ಸ್ವಾಮಿ? ಇವರೇ ನಾಚಿಕೊಳ್ಳದೇ ಇರುವಾಗ, ಕಾಯಕ ಅಂತ ಮೈಮಾರಿ ಪ್ರಾಮಾಣಿಕವಾಗಿ ಗಳಸಿದ ಹಣ್ಣದಲ್ಲಿ ತೆರಿಗೆ ಕಟ್ಟುವ ನಾವು ಯಾಕೆ ನಾಚಿಕೊಳ್ಳಬೇಕು? ಅವರ ಜೀವನ ಶೈಲಿಯಲ್ಲಿ ಕಾಣದ ವಿಕೃತಿ ನಮ್ಮ ಜೀವನದಲ್ಲೇ ಕಾಣುತ್ತದೆ ಯಾಕೆ?”

ಸಂಕ್ರಾಂತಿ - ಪಿ.ಲಂಕೇಶ್.
ಕಂಬಾರರ ಶಿವರಾತ್ರಿಯಂತೆ ಇದೂ ಕೂಡ 12ನೇ ಶತಮಾನದ ಸಾಮಾಜಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಇಟ್ಟುಕೊಂಡು ರಚಿಸಿದ ನಾಟಕ. ಒಂದು ಘಟನೆಯನ್ನಾಧರಿಸಿ ಇಡೀ ಕಾಲದ ವಸ್ತುಸ್ಥಿತಿಯನ್ನು ಹೇಳುವ ಈ ನಾಟಕದ ಸನ್ನಿವೇಶ, ಹುಡುಗ-ಹಡುಗಿಯ ಪ್ರೇಮ ಪ್ರಕರಣ ಕೂಡ ಸಮಾಜದ ಜಾತಿಯ ಎದುರು ಎಂತಹ ತಿರುವನ್ನು ಪಡೆಯುತ್ತದೆ ಎನ್ನುವ ಸನ್ನಿವೇಶವನ್ನು ಅತೀ ಸರಳವಾಗಿ ಚಿತ್ರಿಸಿದ್ದಾರೆ. ಬಸವಣ್ಣನವರ ಕ್ರಾಂತಿಕಾರಕ ಬೆಳವಣಿಗೆ ಹಾಗೂ ಸಂಪ್ರದಾಯವಾದಿಗಳ ಆಗಮಿಕ ಸಿದ್ದಾಂತದೆದುರು ಸ್ಥಿಮಿತತೆ ಇಲ್ಲದ ಬಿಜ್ಜಳನ ತೊಳಲಾಟದ ಪರಿಸ್ಥಿತಿ ಕೂಡ ಚನ್ನಾಗಿ ಮೂಡಿಸಿದ್ದಾರೆ.

ಹುಲಿಗಳ ಜಗತ್ತಿನಲ್ಲಿ ಬಡ ಹುಲಿ, ಶ್ರೀಮಂತ ಹುಲಿ, ಪುರೋಹಿತ ಹುಲಿ, ಹೊಲೆಯ ಹುಲಿ ಇರುವುದಿಲ್ಲ. ಇದೆಲ್ಲಾ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡ ಮೇಲು ಕೀಳಿನ ಪರಿವೆಯಿಲ್ಲ. ಸೂರ್ಯ, ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ. ಆದರೆ ಮನುಷ್ಯನ ಕೈಲಿದ್ದಿದ್ದರೆ ಅದನ್ನೂ ಮಾಡಿಸುತ್ತಿದ್ದ. ಎನ್ನುವ ಮಾತು ಸಾಮಾಜಿಕ ತಾರತಮ್ಯದ ಬಗ್ಗೆ ಸಾತ್ವಿಕ ಸಿಟ್ಟು ಈ ನಾಟದಲ್ಲಿ ಪ್ರತಿದ್ವನಿಸಿದೆ.

No comments:

Post a Comment