Saturday, October 12, 2019

ಪುತ್ರಕಾಮೇಷ್ಟಿ - ವಿವೇಕಾನಂದ ಕಾಮತ್

ಕಾದಂಬರಿ ಪ್ರಕಾರಗಳಲ್ಲಿ ಜನಪ್ರಿಯ ಶೈಲಿ ಅಂತ ಒಂದಿದೆ. ತುಂಬಾ ಸರಳವಾಗಿ, ಸಾಮಾನ್ಯವಾದ ವಿಷಯಗಳನ್ನು ಇಟ್ಟುಕೊಂಡು, ಮಕ್ಕಳಿಗೆ ಊಟ ಮಾಡಿಸುವ ತರಾ ಕತೆಯನ್ನು ಹೇಳೋದು. ಇಲ್ಲಿ ಮುಗ್ದತೆ ಇರುತ್ತೆ, ವ್ಯಕ್ತವಾಗದ ಗಾಂಭಿರ್ಯ ಇರತ್ತೆ. ಸಿನಿಮಯ ಬದಲಾವಣೆಗಳಿರುತ್ತೆ ಒಟ್ಟಿನಲ್ಲಿ ಹೇಳೋದಾದ್ರೆ ಗಂಭೀರವಾದ ದೃಷ್ಟಿಯಿಂದ ಜಗತ್ತನ್ನು ನೋಡಿ ಮನೋರಂಜನೆ ಮುಲಕ ದಾಟಿಸುವ ಸಾಹಿತ್ಯಿಕ ಕಾರ್ಯ ಇಲ್ಲಿ ನಡೆಯುತ್ತಿರುತ್ತದೆ. ಇಲ್ಲಿನ ಕಥಾವಸ್ತು ನಮ್ಮ ಸುತ್ತಮುತ್ತ ನಡೆದಿರಬಹುದಾದದ್ದೆ ಇರುತ್ತದೆ. ಆದರೆ ತಿರುವುಗಳು ಮಾತ್ರ ರೋಚಕವಾಗಿದ್ದು ಸುಲಭವಾಗಿ ಓದುಗರನ್ನು ತನ್ನಜೊತೆಗೆ ಕರೆದುಕೊಂಡು ಹೋಗಿ ಓದಿನ ಜೊತೆಗೂ ಮುಗಿದ ನಂತರವೂ ಮನೊರಂಜನೆಯನ್ನಂತೂ ಕೊಡುತ್ತದೆ. ಹೆಚ್ಚಿನ ಜನರು ಓದುವುದನ್ನು ಶುರು ಮಾಡಿದ್ದೆ ಈ ಶೈಲಿಯ ಕಾದಂಬರಿಗಳಿಂದ. ಈ ಕತೆ ಕಾದಂಬರಿ ಓದಲು ಶುರು ಮಾಡುವ ಸಂದರ್ಭದಲ್ಲಿ ಗಂಭಿರವಾದ ಸಾಹಿತ್ಯವನ್ನು ಅವರ ಕೈಗೆ ಕೊಟ್ಟು ಓದು ಎಂದರೆ ಅವರು ಆ ಕತೆ ಓದುವುದನ್ನು ಬಿಡಿ ಅವರು ಇನ್ಯಾವತ್ತು ಸಾಹಿತ್ಯ ಅಂದರೆ ಮೈಲಿ ದೂರ ಒಡ್ತಾರೆ.
ಈ ಓದುವ ಹುಚ್ಚು ಅಂತಾರಲ್ಲ ಅದನ್ನ ಮೊದಲಬಾರಿಗೆ ಹಿಡಿಸುವ ಕಾರ್ಯವನ್ನು ಮಾಡುವುದೇ ಈ ಜನಪ್ರಿಯ ಶೈಲಿ ಕಾದಂಬರಿಗಳು. ನಾನು ಓದಿರುವ ಮೊದಲ ಕಾದಂಬರಿ "ಯಾವ ಮೋಹನ ಮುರಳಿ ಕರೆಯಿತು" 8 ನೇ ತರಗತಿ ಇದ್ದಾಗ ಅದನ್ನ ಓದಿದ್ದೆ. ಆ ಸಮಯದಲ್ಲಿ ಅದು ನನ್ನ ಎಷ್ಟು ಆವರಿಸಿತ್ತು ಅಂದರೆ ಅಲ್ಲಿ ಕುರುಡನಾದ ಕಥಾನಾಯಕನನ್ನು ತನ್ನ ಬಹುದಿನದ ಗೆಳತಿ ಮದುವೆ ಆಗಲು ಒಪ್ಪಿಕೊಳ್ಳುವ ಸಂದರ್ಭ ಇನ್ನೂ ನನಗೆ ನೆನಪಿದೆ. ಅದರ ನಂತರ ಕೌಂಡಿನ್ಯ ಅನ್ನುವ ಲೇಖಕರ ಸುಮಾರು 70 ಕ್ಕೂ ಹೆಚ್ಚು ಕಾದಂಬರಿ, ಸಾಯಿಸುತೆ, ಯಂಡಮೂರಿ ವಿರೇಂದ್ರನಾಥ, ಉಷಾ ನವರತ್ನರಾವ್ ಹೀಗೆ ಸುಮಾರು ಇನ್ನೂರು-ಮುನ್ನರಕ್ಕೂ ಹೆಚ್ಚು ಜನಪ್ರಿಯ ಶೈಲಿಯ ಕಾದಂಬರಿ ಓದಿದ್ದಿನಿ. ಆದರೆ ಮೊದಲು ಕಾದಂಬರಿ ನೆನಪು ಇನ್ನೂ ಮಧುರ. ಸುಮಾರು ಎರಡು ವರ್ಷಗಳ ಹಿಂದೆ ಯಾವುದೋ ಸಂದರ್ಭದಲ್ಲಿ ನಾ ಓದಿದ ಮೊದಲ ಕಾದಂಬರಿ ಅದನ್ನು ಬರೆದ ಲೇಖಕರ ಮೊದಲ ಕಾದಂಬರಿ ಆಗಿತ್ತಂತೆ. ಈ ವಿಷಯ ತಿಳಿದಾಗ ಇಬ್ಬರಿಗೂ ಆದ ಸಂತೋಷ ಅಷ್ಟಿಷ್ಟಲ್ಲ. ಆ ಕೃತಿಯ ಲೇಖಕರು ವಿವೇಕಾನಂದ ಕಾಮತ್ ( Vivekananda Kamath)

ಅವರೇ ಇತ್ತಿಚೆಗೆ ಬರೆದ ಕಾದಂಬರಿ ಪುತ್ರಕಾಮೇಷ್ಟಿ. (ಅದು ಪುಸ್ತಕ ರೂಪದಲ್ಲಿ ಇನ್ನೂ ಪ್ರಕಟವಾಗಿಲ್ಲ, ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿತ್ತಷ್ಟೆ) ಒಬ್ಬ ಲೇಖಕನ ಜವಾಬ್ಧಾರಿ ಕೆಲಸ ಅಂದರೆ, ಮನುಷ್ಯನಲ್ಲಿರುವ ಸಕಾರಾತ್ಮಕ ಭಾವನೆಗಳನ್ನು ಬಡಿದೆಬ್ಬಿಸುವುದು. ಅದರಲ್ಲೂ ಸಮಕಾಲಿನ ಸಮಾಜದಲ್ಲಿ ಜನರು ತಿಳುವಳಿಕೆಯ ಕೊರತೆಯಿಂದ ಮಾಡುವ ತಪ್ಪುಗಳನ್ನು ಅವರಿಗೆ ಅರಿವಾಗುವಂತೆ ಮಾಡುವ ಅತೀ ಜವಾಬ್ದಾರಿಯುತ ಕೆಲಸ ಲೇಖಕನ ಮೇಲೆ ಇರುತ್ತದೆ. ಭಾರತದ ಪ್ರಾಧಾನಿಯರು ಜಾರಿಗೆ ತಂದಿರುವ "ಭೇಟಿ ಬಜಾವೋ, ಭೇಟಿ ಪಡಾವೋ" ಕಾರ್ಯಕ್ರಮಕ್ಕೆ ರಾಯಭಾರಿಯಾಗುವಂತಹ ಕಾದಂಬರಿ ಇದು. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ", ಹೆಣ್ಣು ಸಂಸಾರದ ಕಣ್ಣು, ಹೀಗೆ ಹೆಣ್ಣಿನ ಮಹತ್ವ ಹೊಗಳಿಕೆಯನ್ನು ಮೀರುವಂತದ್ದು. ಆದರೆ ಕೆಲವೊಂದು ಕಡೆ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದಾಗ ಈ ಮಾತುಗಳು ಪುಸ್ತಕದ ಬದನೆಕಾಯಿ ಅನ್ನಿಸಿ ಮಾಯಲಾರದ ಹುಣ್ಣು ಹುಟ್ಟಿದೆ ಅನ್ನಿಸಿ ಆ ಮಗುವನ್ನೂ, ಹೆತ್ತಮ್ಮನ್ನನ್ನೂ ಕೀಳಾಗಿ ಕಂಡು ಅವರನ್ನು ಮನೆಯಿಂದ ಆಚೆ ಕಳುಹಿಸುವುದು, ಬೇರೆ ಮದುವೆಯಾಗುವುದು, ಭ್ರೂಣ ಹತ್ಯೆ, ಕೆಲವೊಂದು ಕಡೆ ಹೆಣ್ಣು ಹುಟ್ಟಿದೆ ಅಂತ ಆತ್ಮಹತ್ಯೆಗೆ ಯತ್ನ ಮಾಡುವಂತ ಕೆಲವು ಸಂಕುಚಿನ ಮನಸ್ಸಿರುವ ಸಮಾಜದಲ್ಲಿ ನಾವಿದ್ದೀವಿ. ಇದನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ರಚಿಸಿದ ಕಾದಂಬರಿ ಪುತ್ರಕಾಮೇಷ್ಟಿ. ಕೊನೆಗೆ ಹೆಣ್ಣನ್ನು ತಾತ್ಸಾರದಿಂದ ನೋಡುವ ವ್ಯಕ್ತಿಯೇ ಆಕೆಯನ್ನು ದೇವರನ್ನಾಗಿ ಕಾಣುವ ಪರಿಸ್ಥಿತಿ ಬರುತ್ತದೆ. ಆಕೆ ಅಬಲೆಯಲ್ಲ ಸಬಲೆ. ಮಕ್ಕಳಲ್ಲಿ ಹೆಣ್ಣುಗಂಡು ವ್ಯತ್ಯಾಸ ಮಾಡುವುದು ಎಂತಹ ಮೂರ್ಖತನ ಎನ್ನುವುದನ್ನು ಈ ಕಾದಂಬರಿಯ ಮೂಲಕ ಲೇಖಕರು ತಿಳಿಸಿಕೊಟ್ಟಿದ್ದಾರೆ.
ಹಳಸಲಾದ ಸ್ತ್ರೀ ವಾದ ಅಂತ ಸೃಷ್ಟಿಮಾಡಿಕೊಂಡು, ತೌಡುಕುಟ್ಟುತ್ತಾ, ಗೊಡ್ಡುವಾದ ಮಾಡುತ್ತಿರುವ ಸ್ವಯಂ ಘೋಷಿತ, ಸೋ ಕಾಲ್ಡ್ ಸ್ತ್ರೀವಾದಿಗಳಿಗಿಂತ ಇಂತಹ ಕೃತಿಗಳು ಸಾಹಿತ್ಯದಲ್ಲಿ ಬಂದರೆ ಸಮಾಜದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಸಕಾರಾತ್ಮಕವಾಗಿ ಬದಲಾಗತ್ತೆ. ಇದನ್ನು ಯಾಕೆ ಉಲ್ಲೇಖಿಸುತ್ತಿದ್ದೇನೆಂದರೆ ಯಾವುದೇ ಒಬ್ಬ ಗಂಡಸು ಹೆಣ್ಣು ಜೀವಿಯನ್ನು ಕೀಳಾಗಿ ಕಂಡಾಗ ನಮ್ಮ ಸ್ತ್ರೀವಾದಿಗಳು ಅದನ್ನು ಇಡೀ ಗಂಡುಕುಲದ ಕುತ್ತಿಗೆಗೆ ಕಟ್ಟಿ ಅದಕ್ಕೆ ನೇತಾಡುತ್ತಿರುತ್ತಾರೆ. ಆದರೆ ಲೇಖಕ ಈ ಕಾದಂಬರಿಯಲ್ಲಿ ಆ ತಪ್ಪನ್ನು ಮಾಡುವುದಿಲ್ಲ, ವ್ಯಕ್ತಿ ಮಾಡಿದ ತಪ್ಪಿಗೆ ಸಮುದಾಯವನ್ನು ದೋಷಿಸುವುದಿಲ್ಲ.
ಕಾದಂಬರಿ ಸುಲಭವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಸಿನಿಮಿಯವಾಗಿದೆ. ಕಾದಂಬರಿ ಎಲ್ಲಯೂ ಬೋರುಹೊಡೆಸುವುದಿಲ್ಲ.
ಒಟ್ಟಿನಲ್ಲಿ ಕಾದಂಬರಿ ಇಷ್ಟವಾಯ್ತು.

No comments:

Post a Comment