Saturday, October 12, 2019

ನೀಲಗಂಗಾ ಎಂಬ ಹಿರಿಹೊಳೆಯ ರೂಪಕ.

ಬಾಳಾಸಾಹೇಬ ಲೋಕಾಪುರ ಎಂದರೆ ನೆನಪಾಗುವ ಕಾದಂಬರಿಗಳು ಹುತ್ತ, ಉಧೋ-ಉಧೋ ಹಾಗೂ ಕಳೆದ ವರ್ಷ ಬಿಡುಗಡೆಯಾದ “ಕೃಷ್ಣೆ ಹರಿದಳು”. ಅವರ ಕಥೆ ಮತ್ತು ಕಾದಂಬರಿಗಳನ್ನು ಗಮನಿಸಿದಾಗ ಎದ್ದು ಕಾಣುವ ಪ್ರಮುಖ ವಿಷಯವೆಂದರೆ ಜವಾರಿಯಾಗಿರುವ ಕಥಾವಸ್ತು ಹಾಗೂ ಕಥಾಶೈಲಿ. ಬೆಳಗಾವಿ ಸೀಮೆಯ ಕನ್ನಡದಲ್ಲಿ ನಿರೂಪಿತವಾಗ ಅವರ ಕಾದಂಬರಿಗಳಲ್ಲಿ ಅಪಾರ ಜೀವನಾನುಭವ ಹಾಗೂ ಗ್ರಾಮೀಣ ಸಾಂಸ್ಕೃತಿಯ ಶ್ರೀಮಂತಿಕೆ ತುಂಬಿ ಬರುತ್ತದೆ. ಅವರ ಕಾದಂಬರಿ ಹಾಗೂ ಕಥೆಗಳನ್ನು ಓದುವುದೇ ಒಂದು ಸೊಗಸು. ಇವರು ಬಳಸುವ ನುಡಿಗಟ್ಟುಗಳು ಹಾಗೂ ರೂಪಕಗಳು ಕಾದಂಬರಿ ಓದುವಾಗ ಹೊಸ ಮೆರುಗನ್ನು ಕಟ್ಟಿಕೊಡುತ್ತವೆ.
ಸಮಾಜದಲ್ಲಿ ನೀಚರು, ಲಫಂಗರು ಕೇವಲ ಬೆರಳೆಣೆಕೆಯಲ್ಲಿ ಮಾತ್ರ ಇರೋದು, ಅವರ ನೀಚತನ, ಲಂಪಟತನ ಇತರ ಮುಗ್ಧ ಜೀವಿಗಳಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಬದುಕಲ್ಲಿ ಹಿಡಿದುಕಟ್ಟಿ ತೋರಿಸಿದ ಕಾದಂಬರಿ “ನೀಲಗಂಗಾ”. ಸಮಾಜದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಋಣಾತ್ಮಕ ಅಂಶಗಳು ಧನಾತ್ಮಕ ಅಂಶಗಳಿಗಿಂತ ಬಹುಬೇಗ ಸಮಾಜದಲ್ಲಿ ತನ್ನ ಪರಿಣಾಮವನ್ನು ತೋರಿಸುತ್ತದೆ. ಉತ್ತರ ಕರ್ನಾಟಕದ ಕೃಷ್ಣಾನದಿ ತೀರವಾದ ಅಥಣಿ ಪ್ರದೇಶದವರಾದ ಲೋಕಾಪುರ ಅವರು ಈ ಕಾದಂಬರಿಗೆ ವಸ್ತುಕ್ಷೇತ್ರವಾಗಿ ತಮ್ಮ ಊರನ್ನೇ ಆಯ್ದುಕೊಂಡರೂ ಸಹ ಭಾರತದ ಯಾವ ಭಾಗದ ಹಳ್ಳಿಯಲ್ಲಿಯಾದರೂ ನಡೆದಿರಬಹುದು ಎಂದು ಅಂದಾಜಿಸುವಷ್ಟರ ಮಟ್ಟಿಗೆ ಕಾದಂಬರಿ ವಾಸ್ತವಿಕವಾಗಿದೆ.

          ಕಾದಂಬರಿ ಶ್ರೀಮಂತಿಕೆ ಅಡಗಿರುವುದು ಕಥಾಶೈಲಿ ಹಾಗೂ ಆಡಿದಷ್ಟು ಓದುವಾಗಲೂ ಸೊಗಸೆನ್ನಿಸುವ ಬರವಣಿಗೆ ಶೈಲಿ. ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಮೂರು ಪಾತ್ರಗಳು. ನೀಲಗಂಗಾ, ಪಂಚಯ್ಯ ಹಾಗೂ ಸ್ವರೂಪರಾಣಿ. ಈ ಮೂವರ ಸ್ವಗತದಲ್ಲಿ ಕಥಾ ಹಂದರ ಹೆಣೆಯುವ ಲೇಖಕರ ತಂತ್ರ ಎಲ್ಲಿ ಕೂಡ ಬೋರು ಹೊಡೆಸದಂತೆ ಕಾದಂಬರಿಯ ಕೊನೆಯವರೆಗೂ ತನ್ನ ಸ್ವಾರಸ್ಯವನ್ನು ಕಾಯ್ದುಕೊಳ್ಳುತ್ತದೆ.
 ಕಾದಂಬರಿಯ ಕಥಾನಾಯಕಿ ನೀಲಗಂಗಾಆಕೆಯನ್ನು ನಾಯಕಿ ಅನ್ನೋದಕ್ಕಿಂತ ದುರಂತ ನಾಯಕಿ ಎಂದು ಕರೆದರೆ ಹೆಚ್ಚು ಸಂಜಸವಾಗಬಹುದೇನೋಈಕೆ ಹಳ್ಳಿಯ ಮುಗ್ದ ಹುಡುಗಿಬಣ್ಣ-ಬಣ್ಣದ ಕನಸು ಕಾಣುವ ವಯಸ್ಸಿನಲ್ಲಿ ಬಾಳಿನ ದುರಂತಕ್ಕೆ ಸಿಕ್ಕು ನರಳಿದವಳುಅವಳ ಕನಸಿನಲ್ಲಿ ಬಂದ ಕತ್ತಲೆ ಬೆಳಕು ಹರಿಯುವುದರೊಳಗೆ ಮನೆಯ ಹೊಸ್ತಿಲಿಗೆ ಬಂದು ನಿಂತಾಗಿತ್ತುಬದುಕು ಎಂಬುದು ಏನು ಅಂತ ತಿಳಿಯುವುದರೊಳಗೆ ಬದುಕಿನ ಗರಿಷ್ಟ ಕ್ರೌರ್ಯವನ್ನು ಉಂಡವಳು ನೀಲಗಂಗಾಕೊನೆಗೂ ಹಂಬಲದಿಂದ ಬದುಕುವುದು ಕೂಡ ಒಂತರಾ ಹಸಿವು ಅಲ್ಲೇನು? ಅಂತ ಹಂಬಲದ ಬದುಕನ್ನು ಆಯ್ದುಕೊಂಡಾಕೆ. ಬದುಕನ್ನು ಸದಾ ಪ್ರೀತಿಸುವಾಕೆ.  ಮುಕ್ಕಳಿಸಿ ಉಗಳಿರದರೂ ಇನ್ನೂ ತೊಳೆಯುವ ಕೆಲಸ ಉಳಿದಿದೆ ಎಂದು ಮುಂದೆ ಮುಂದೆ ಹರಿಯುವ ಗುಣದಾಕೆ.  ಈಕೆಯ ಸುತ್ತ ಕಾದಂಬರಿ ಹೆಣೆದುಕೊಳ್ಳುತ್ತಾ ಹೋಗುತ್ತದೆ.
ನೀಲಗಂಗಾಗೆ ಸ್ವರೂಪರಾಣಿ ಹೇಳುವ ಮಾತು ಮನಮುಟ್ಟುವಂತದ್ದು, ಅದು ನೀಲಗಂಗಾನಂತವರಿಗೆ ಹೇಳುವಂತದ್ದಲ್ಲ, ಹೆಣ್ಣನ್ನು ವ್ಯಾಖ್ಯಾನಿಸುವಂತದ್ದು, ಆಕೆಯ ಹಿರಿಮೆಯನ್ನು ಕಟ್ಟಿಕೊಡುವಂತದ್ದು. ಅದು ಕಾದಂಬರಿಯಲ್ಲಿ ಹೀಗೆ ಬಂದಿದೆ “ನೋಡು ನಿಲಗಂಗಾ ನಮ್ಮ ಮುಂದ ಹರಿಯುವ ಈ ಗಂಗೆ ಇದ್ದಾಳಲ್ಲ ಉದ್ದಕ್ಕೂ ಅಕಿಮ್ಯಾಲ ಎಷ್ಟು ಹೊಲಸ ಚೆಲ್ಲತ್ತೀವಿ. ಮತ್ತ ಗಂಗೆ ಅಪವಿತ್ರ ಆಗಾಕ ಸಾಧ್ಯ ಐತೇನು? ಅಕಿ ಸ್ವತಃ ಪವಿತ್ರ ಇದ್ದಾಳ. ಹಾಂಗ ನೀನು ಸ್ವತಃ ಶುದ್ಧ ಇದ್ದೀ. ಪವಿತ್ರ-ಅಪವಿತ್ರ ಅನ್ನೋದು ಮನಸ್ಸಿಗಿ ಸಂಬಂಧ ಪಟ್ಟದ್ದು ದೇಹಕ್ಕಲ್ಲ. ನಿನ್ನ ದೇಹದ ಮ್ಯಾಲ ಆಕ್ರಮಣ ಆತು. ಆದ್ರ ನಿನ್ನ ಮನಸ್ಸು ಶುದ್ಧ ಐತಿ. ಈಗ ಇಲ್ಲಿ ಹರಿಯುತ್ತಿರುವ ಗಂಗೆ ಹಾಂಗ. ನಡದ ಹ್ವಾದ ಘಟನೆಯಲ್ಲಾ ಕನಸ ಅಂತ ತಿಳಕೋ. ಬದುಕಿನ ಗುರಿ ಅನ್ನು ನೆನಪಮಾಡ್ಕೋ, ತನ್ನ ಮ್ಯಾಲ ಕಸಾ ಚೆಲ್ಲಿದವರನ ಸಿಟ್ಟಿಗೆದ್ದ ನೋಡ್ಕೊತ ಇಲ್ಲೇ ನಿಲ್ತಾಳೇನು? ಮುಂದ ಮುಂದ ಹರಿಲಾತ್ಯಾಳಿಲ್ಲೋ?“
 ಕಾದಂಬರಿಯಲ್ಲಿ ಬರುವ ಇನ್ನೊಂದು ಪ್ರಮುಖ ಪಾತ್ರ ಸ್ವರೂಪರಾಣಿಸ್ವರೂಪರಾಣಿ ನೀಲಗಂಗಾನಂತೆ ಮೋಸ ಹೋದರೂ ಅದರಿಂದ ಹೊರ ಬರುವಷ್ಟು ಶಕ್ತಿ ಇದ್ದಕೆ. ಬದುಕೆಂದರೆ ನದಿಯಲ್ಲಿ ಈಜು ಬಿದ್ದಹಾಗೆ. ಇಲ್ಲಿ ತೇಲಬೇಕಾದರೆ (ಬದುಕಬೇಕಾದರೆ) ಕೈಕಾಲು ಬಡಿಯಬೇಕು ಇಲ್ಲ ಉಸಿರು ಬಿಗಿ ಹಿಡಿದು ಯೋಗಕೇಂದ್ರಿತವಾಗಬೇಕು. ಆದರೆ ಹೆಚ್ಚಿನವರು ಆಯ್ದುಕೊಳ್ಳುವುದು ಕೈಕಾಲುಬಡಿದು ತೇಲುವ ಸಂಗತಿಗಳನ್ನೇ. ಆದರೆ  ಸ್ವರೂಪರಾಣಿ ಕೊನೆಗೂ ಯೋಗಿನಿಯಾದಾಕೆ.  ಆದರೆ ನನ್ನ ಅನಿಸಿಕೆಯಂತೆ ಈ ಕಾದಂಬರಿಯ ಗಟ್ಟಿ ಪಾತ್ರ ಹಾಗೂ ಸದಾ ನೆನಪಲ್ಲಿ ಉಳಿವ ಪಾತ್ರವೆಂದರೆ  ನಾಗವ್ವ. ಅನಕ್ಷರಸ್ಥೆಯಾದ ಈಕೆಯಲ್ಲಿ ತುಂಬಿದ ಮನುಷ್ಯತ್ವ ಬೆರಗು ಹುಟ್ಟಿಸುವಂತದ್ದು. ಒಂದೊಮ್ಮೆ ಪುಣೇಕರ್ ಅವರ ಗಂಗವ್ವ ಕಣ್ಣಮುಂದೆ ಸುಳಿದು ಹೋಗುತ್ತಾಳೆ. ಈಕೆಯ ಪಾತ್ರ ಕಿರಿದಾದರೂ ಅಂತಃಕರಣ ತುಂಬಿ ತುಳುಕುವಷ್ಟು.
ಇನ್ನು ಪಂಚಯ್ಯನ ಪಾತ್ರವನ್ನು ಗಮನಿಸಿದಾಗ ಈತ ಒಬ್ಬ ಲಫಂಗ. ನಮ್ಮ ಸುತ್ತಮುತ್ತ ಇವನಂತಹ ಪಾತ್ರದಾರಿಗಳು, ಸಹೃದಯರ ಸೋಗು ಹಾಕಿಕೊಂಡ ವಿದ್ರೋಹಿಗಳು ಎಲ್ಲಡೆ ಕಾಣಸಿಗುತ್ತಾರೆ. ಇವರ ಲಂಪಟತನದ ಗುಣಗಳೇ ಅನೇಕ ಮುಗ್ದರ ಜೀವನಗಳನ್ನು ಬಲಿಪಶು ಮಾಡುತ್ತದೆ. ಈತನ ಬೆಳೆದು ಬಂದ ಸ್ಥಿತಿ ಕಷ್ಟದ್ದಾಗಿಯೇ ಇದ್ದರೂ ಅದೆಲ್ಲ ಅವರ ಲಂಪಟತನದ ಮುಂದೆ ಗೌಣವಾಗುತ್ತದೆ. ಈ ಕಾದಂಬರಿಯ ಬಗ್ಗೆ ಒಂದು ತಕರಾರೆಂದರೆ ಈ ಕಾದಂಬರಿಗೆ ಸುಖಾಂತ್ಯವನ್ನು ಲೇಖಕ ಕೊಡಬಾರದಿತ್ತು ಎಂದು. ಆದರೆ ಬದುಕೆಂದರೆ ಹಾಗೇನೆ, ಕೆಲವರ ಒಳ್ಳೆಯವರ ನೆರಳಿನಲ್ಲಿ ಇನ್ನೊಬ್ಬರ ಪಾಪಕೃತ್ಯಗಳು ಗೌಣವಾಗಿಬಿಡುವಂತೆ ನೀಲಗಂಗಾನ ಬದುಕಿನ ಆಶಾಭಾವದೊಂದಿಗೆ ಈತನ ತಪ್ಪುಗಳು ತೆಳು ಪರದೆಯಲ್ಲಿ ಮುಚ್ಚಿದಂತೆ ಕಾಣುತ್ತದೆ.
ಇದು “ಕಥಾ ಸಂವಿಧಾನ” ಹೊಂದಿದ್ದರೂ ನನ್ನ ಅರಿವಿಗೆ ಬರುವುದು ಕಾವ್ಯ-ಕಥನದ ತರಹ. ಕಾವ್ಯ ಹುಟ್ಟಿಸಬಲ್ಲವ ನಿರಂತರವಾಗಿ ತನ್ನ ಮನಸ್ಸಿನಲ್ಲಿ ತಳಮಳದ ಒದ್ದಾಟವನ್ನು ಬಸುರಿ ಹೆಂಗಸಿನ ಹಾಗೆ ಅನುಭವಿಸುತ್ತಾನೆ ಅನ್ನಿಸುತ್ತದೆ. ಅದು ಈ ಕಾದಂಬರಿ ಓದುವಾಗ ಅರಿವಿಗೆ ಬಂದೇ ಬರುತ್ತದೆ. ಸಾಹಿತ್ಯ ಓದುವುದು ಸುಖದ ಕೆಲಸ, ಆದರೆ ಅದನ್ನು ಸೃಷ್ಟಿಸುವ ಲೇಖಕನ ಸ್ಥಿತಿ ಇದೆಯಲ್ಲ ಅದು ಬಲು ಕಠಿಣದ ದಾರಿ.
ಲೇಖಕರೇ ಕಾದಂಬರಿಯಲ್ಲಿ ಹೇಳುವಂತೆ ಬದುಕಿನಲ್ಲಿ ಸುಖ ಎಂಬುದು ಸಾರಾ ಸಗಟಾಗಿ ಸುಮ್ಮನೇ ಸಿಗುವುದಲ್ಲ. ಅದು ಇಸ್ಪಿಟಿನ ಜೋಕರದ ಹಾಗೆ, ಎಲ್ಲೋ ಎಲೆಗಳಲ್ಲಿ ಮುಚ್ಚಿ ಹೋಗಿರುತ್ತದೆ. ಸುತ್ತ ಕುಳಿತವರು ಎಲೆ ಎಳೆಯುತ್ತಾ ಚೆಲ್ಲುತ್ತಾ ಕುಳಿತಾಗ ಯಾರೋ ಒಬ್ಬರಿಗೆ ರಮ್ಮಿ ಆಗಲು ಫಕ್ಕನೆ ಸಿಕ್ಕ ಜೋಕರದಂತೆ ಸುಖ. ಒಮ್ಮೊಮ್ಮೆ ಹಾಗೇ ಸಿಕ್ಕರೂ ಯಾವುದಕ್ಕೆ ಉಪಯೋಗ ಬರದೆ ಕೈಯಲ್ಲಿಯ ಜೋಕರನ್ನೇ ಚೆಲ್ಲಬೇಕಾದ ಸ್ಥಿತಿ ಬರುವ ರಮ್ಮಿ ಆಟದ ಹಾಗೆ.
ಈ ಪ್ರೇಮಗಾಥೆಯನ್ನು ಕಟ್ಟಿಕೊಟ್ಟ ಲೇಖಕರಿಗೆ ಅನಂತ ಧನ್ಯವಾದಗಳು. ಅವರಿಂದ ಇನ್ನೂ ಅನೇಕ ಕೃತಿಗಳು ಹೊರಬರಲೆಂದು ಆಶಿಸುತ್ತಾ…….

No comments:

Post a Comment