Saturday, October 12, 2019

ಪ್ರೀತಿಯನ್ನು ಚೇತನಗೊಳಸುವ ಸಂಜೀವಿನಿ

ಇದೊಂದು ಚಂದದ ಪ್ರೇಮ ಕಥೆ. ಸಂಕ್ತಿಪ್ತವಾಗಿ ಹೇಳಬೇಕೆಂದರೆ ಹುಡಗ-ಹುಡುಗಿಯ ವಯೋಸಹಜವಾದ ಆಕರ್ಷಣೆ ಪ್ರೀತಿಯಾಗತ್ತೆ, ಆ ಪ್ರೀತಿ ಮನೆಯವರಿಗೆ ಗೊತ್ತಾಗಿ ಅವರು ಮುನಿಸಿಕೊಂಡಾಗ ಹೇಗೋ ಅಲ್ಲಿಗೆ ನಿಂತು ಹೋಗತ್ತೆ. ಈ ಅಗಲಿಕೆ ಇಬ್ಬರಿಗೂ ವಿರಹ ವೇದನೆ ತರುತ್ತದೆ. ಆ ವಿರಹ ಬೂದಿಯಲ್ಲಿ ಬೆಂದು, ಆ ಸುಟ್ಟಕಲೆ ಮಾಯುವ ಮುನ್ನವೇ ಹೆತ್ತವರ ಮಾತನ್ನು ವಿರೋಧಿಸಲಾಗದೇ ಹುಡುಗಿ ಇನ್ನೊಂದು ಮದುವೆಗೆ ಒಪ್ಪಿಕೊತ್ತಾಳೆ. ಈ ಪರಿಸ್ಥಿತಿಯಲ್ಲಿ ಹೇಳದೆ-ಕೇಳದೆ ಬಿಟ್ಟು ಹೋದ ಹುಡುಗ ನಾಟಕೀಯ ರೂಪದಲ್ಲಿ ಬಂದು ಬಿಟ್ಟು ಹೋದ ಬಗ್ಗೆ ಕಾರಣ ತಿಳಿಸಿದಾಗ  ಇಬ್ಬರೂ ಒಂದಾಗ್ತಾರೆ. ಇದನ್ನು ಕೇಳಿದಾಗ ಒಂತರಾ ವಾಚ್ಯ ಅನ್ನಿಸಬಹುದು. ಆದರೆ ಈ ಕಾದಂಬರಿ ಮೇಲೆ ತಿಳಿಸಿದ ಕ್ಷೀಷೆಯನ್ನೇ ವಿಭಿನ್ನವಾಗಿ ಚಿತ್ರಿಸಿ ಬೊರು ಹೊಡೆಸದಂತೆ ನೋಡಿಕೊಳ್ಳುತ್ತಾರೆ. ತುಂಬಾ ದಿನದ ನಂತರ ಬೇಟಿಯಾದ ಕ್ಲಾಸ್’ಮೇಟ್ ಒಬ್ಬ ತನ್ನ ಕಥೆಯನ್ನು ಹೇಳುವಾಗ ಕೇಳಿಸಿಕೊಳ್ಳುವ ಆಪ್ತತೆ ಈ ಕಾದಂಬರಿ ಓದುವಾಗ ಸಿಕ್ಕಿತು.
ಕಾದಂಬರಿಯ ಕಥಾವಸ್ತು ದಿನನಿತ್ಯ ಸಿನೇಮಾದಲ್ಲಿ ನೋಡುವ ತರ ಇದ್ದರೂ ಕಥೆ ಹೇಳುವ ಶೈಲಿ ಭಿನ್ನ. ಕ್ಲೀಷೆಯಲ್ಲಿಯೂ ತಾಜಾತನವಿದೆ ಎಂದರೆ ತಪ್ಪಾಗಲಾರದು. ಪ್ರೀತಿ-ಪ್ರೇಮ ಎನ್ನುವ ವಿಚಾರ ಇಟ್ಟುಕೊಂಡು ಹದಿಹರೆಯದ ಹುಡುಗ-ಹುಡುಗಿಯ ತುಮುಲಗಳನ್ನು ಸಶಕ್ತವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಅಲ್ಲಲ್ಲಿ ಕವನಗಳ ಮುಖಾಂತರ ಕಾದಂಬರಿಯ ಸೊಗಸನ್ನು ಹೆಚ್ಚಿಸಿದ್ದರೂ ದ್ವಿತಿಯಾರ್ಧದಲ್ಲಿ ಅವನ್ನು ಬಿಟ್ಟೇ ಬಿಟ್ಟಿದ್ದಾರೆ.
ಇಡೀ ಕಾದಂಬರಿ ನಾಯಕಿಯ ಸ್ವಗತದಲ್ಲಿ ನಿರೂಪಿತವಾಗಿದ್ದು ಕೊನೆಯಲ್ಲಿ ಮಾತ್ರ ನಾಯಕನ ಸ್ವಗತ ಕಥಾ ಹಂದರವನ್ನು ಮರಳಿ ನಿರೂಪಿಸುತ್ತಾ ಸ್ವಲ್ಪಮಟ್ಟಿಗೆ ಬೋರು ಹೊಡೆಸುತ್ತದೆ. ಇಲ್ಲಿ ನಾಯಕನ ಸ್ವಗತ ಪೂರ್ಣವಾಗಿ ತೆರೆದಿಡುವುದಕ್ಕಿಂತ ತೇಲಿಸಿ ನಿರೂಪಿಸುವ ತಂತ್ರ ಅನುಸರಿಸಬಹುದಿತ್ತು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನಾಯಕನ ಭಿನ್ನಪ (ಕನ್ಪೇಷನ್) ಅಷ್ಟೇನು ಗಟ್ಟಿ ಅಂತ ಅನ್ನಿಸುವುದೇ ಇಲ್ಲ. ಅವ ಪ್ರೀತಿಯನ್ನು ತೊರೆದ ಬಗ್ಗೆ ಸಮಜಾಯಿಸಿ ಕೊಟ್ಟರೂ ಇಷ್ಟೇನಾ ಎನ್ನುವ ಅಭಿಪ್ರಾಯ ಮೂಡುತ್ತದೆ. ಕಥಾ ತಂತ್ರದಲ್ಲಿ ಇನ್ನಷ್ಟು ರಮ್ಯ ಹಾಗೂ ರೋಚಕತೆಯನ್ನು ಅಳವಡಿಕೊಳ್ಳಬಹುದಿತ್ತು.
ಇಂಜಿನಿಯರ್ ಕಾಲೇಜ್ ನ ವಾತಾವರಣ, ಹಾಸ್ಟೇಲ್ ಜೀವನ, ಸಾಂಪ್ರದಾಯಿಕ ಕುಟುಂಬಗಳ ಚೌಕಟ್ಟುಗಳು, ವಯಸ್ಸಿನ ಆಕರ್ಷಣೆಗಳು, ಕಂಪನಿಯಲ್ಲಿನ ಕೆಲಸಗಳ ವಾತಾವರಣ ಇವೆಲ್ಲವನ್ನು ಎಲ್ಲೆಲ್ಲಿ ಬೇಕೋ ಅಷ್ಟೇ ಉಪಯೋಗಿಸಿದ ಪ್ರೌಢಿಮೆ ಮೆಚ್ಚುವಂತದ್ದು.












“ಸಂಜೀವಿನಿ” ಅಂದರೆ “ಸೆಲಗಿನೆಲ್ಲ ಬ್ರಯೊಪ್ಟೆರಿಸ್” ಎನ್ನುವ ಜಾತಿಗೆ ಸೇರುವ ಔಷದಿಯ ಸಸ್ಯ. ಆದರೆ ಪುರಾಣದಲ್ಲಿ ಇದು ಸತ್ತವರನ್ನು ಬದುಕಿಸುವ ಸಸ್ಯ. ಈ ಕಾದಂಬರಿಯಲ್ಲಿ “ಸಂಜೀವಿನಿ” ಸಾವಿನ ಪರ್ಯಾಯ ಸ್ಥಿತಿ ಮುಟ್ಟಿದ ಪ್ರೀತಿಯನ್ನು  ಚೇತನಗೊಳಿಸಿ ಮತ್ತೆ ಆರೋಗ್ಯ ಸ್ಥಿತಿಗೆ ತರುವ ಜೀವಮೂಲಿಕೆ ಎನ್ನುವುದಕ್ಕಿಂತ ಸಾವಿನಿಂದಲೇ ಮುಕ್ತಿ ಕೊಡಬಲ್ಲ ಮಾಯಾಮೂಲಿಕೆಯ ರೂಪಕವಾಗಿ ಬಂದಿದೆ ಎನ್ನಬಹುದು.  
ಇದು ಲೇಖಕಿಯ ಮೊದಲ ಕಾದಂಬರಿಯಾದರೂ ಪ್ರೌಢತೆಯಿಂದ ಕೂಡಿದೆ. ಇನ್ನೂ ಇವರಿಂದ ಒಳ್ಳೊಳ್ಳೆಯ ಕಾದಂಬರಿಗಳು ಸಾರಸತ್ವಲೋಕಕ್ಕೆ ಸಿಗಲಿ ಎಂದು ಆಶಿಸುತ್ತಾ ಲೇಖಕಿಗೆ ಶುಭವಾಗಲಿ.

No comments:

Post a Comment