Saturday, October 12, 2019

ಮುಕ್ಕು ಚಿಕ್ಕಿಯ ಕಾಳಿನಲ್ಲಿ ಜವಾರಿ ಬೆಳೆ ತೆಗೆದ ಜಯಲಕ್ಷ್ಮಿ ಪಾಟೀಲ.

“ಮುಕ್ಕು ಚಿಕ್ಕಿಯ ಕಾಳು” ಈ ತರಹದ ಕಾದಂಬರಿಗೆ ಸಾಹಿತ್ಯದ ಪರಿಭಾಷೆಯ ಪ್ರೇರಣೆ, ಶೈಲಿ, ಚೌಕಟ್ಟು ಅಂತಾರಲ್ಲ ಅವೆಲ್ಲ ಬೇಕಾಗುವುದೇ ಇಲ್ಲ ಇಲ್ಲಿ. ದಟ್ಟ ಅನುಭವ, ಸೊಗಡಿನ ಆಸ್ವಾದ ಅಂತಾರಲ್ಲ ಅದರಿಂದ ಮಾತ್ರ ಹುಟ್ಟುವಂತದ್ದು. ಜೀವನದ ಬೆಂಕಿಯಲ್ಲಿ ಬೆಂದು, ಇದ್ದಿಲಾಗಿ ಆ ಬೆಂದ ಕಥೆಯನ್ನು ಹೇಳಲು ಪುನಃ ಹೊತ್ತಿ ಅಗ್ಗಿಷ್ಟಿಕೆಯಾಗಿ ಆ ಹಿತವಾದ ಕಾವಿನಲ್ಲಿ ಬದುಕನ್ನು ತೋರಿಸುವ ಪ್ರಕಾರ ಇದು. ಉತ್ತರ ಕರ್ನಾಟಕದ ಭಾಷಾ ಶ್ರೀಮಂತಿಕೆಯನ್ನು ಘನಿಷ್ಟಮಟ್ಟದಲ್ಲಿ ಬಳಸಿಕೊಂಡು ಅಲ್ಲಿನ ಸಾಮಾಜಿಕ ತಲ್ಲಣಗಳಿಗೆ ಮುಖಾಮುಖಿಯಾಗುವಂತ ಕಾದಂಬರಿ ಇದು.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಕಾದಂಬರಿಯ ಬೆನ್ನುಡಿಯಲ್ಲಿ ಕೆ.ಸತ್ಯನಾರಾಯಣ ರವರು ಹೇಳ್ತಾರೆ. “ನಾವೆಲ್ಲ ನೋಡುತ್ತಿರುವ ಬದುಕನ್ನು ಕಾದಂಬರಿಕಾರ್ತಿ ನಮ್ಮೆಲ್ಲರಿಗಿಂತ ಮತ್ತು ಸಾಹಿತ್ಯದ ಉಳಿದ ಪ್ರಕಾರಗಳಲ್ಲಿ ಬರೆಯುತ್ತಿರುವವರೆಲ್ಲರಿಗಿಂತಲೂ ಭಿನ್ನವಾಗಿ ವಿಶಿಷ್ಠವಾಗಿ ಕಾಣುತ್ತಾರೆ. ಹಾಗಂದರೇನೆಂದು ವಿವರಿಸುವುದು ಕಷ್ಟ”ಅಂತ. ಇದು ಖರೇನೆ. ಹಳೆ ಮೈಸೂರು, ಮಂಗಳೂರು ಅಷ್ಟೇ ಏಕೆ ದಕ್ಷಿಣ ಕರ್ನಾಟಕದ ಹೆಚ್ಚಿನ ಜನ ಓದಿದಾಗ ಬಹುಷಃ ಇದೇ ತರಹ ಅಭಿಪ್ರಾಯ ಪಡಬಹುದು. ಆದರೆ “ಬಿಜಾಪುರ-ಬಾಗಲಕೋಟೆ-ಬೆಳಗಾಂ”ವೃತ್ತದೊಳಗಿನ ವ್ಯಕ್ತಿಗೆ ಇದು ಬೇರೆಯದೇ ಕಥೆ ಅಂತ ಅನ್ನಿಸುವುದೇ ಇಲ್ಲ. ಈ ಕಾದಂಬರಿ ನಾವು ದಿನನಿತ್ಯ ನಡೆಯುವ ಪ್ರಕ್ರಿಯೆಗಳನ್ನು ಕಣ್ಣಿಗೆ ಕಟ್ಟಿದಾಂಗ, ಕೆಲವೊಂದು ಯಾರದೋ ಆತ್ಮಕಥೆ ಓದಿದಹಾಗೆ ಅನ್ನಿಸುವ ಮಟ್ಟಿಗೆ ವಾಸ್ತವವಾಗಿ ಮೂಡಿ ಬಂದಿದೆ. ಇನ್ನೂ ಮುಂದುವರೆದು ಹೇಳಬೇಕಾದರೆ ಇದೆಲ್ಲ ಇಷ್ಟು ದಿನ ನನ್ನ ಮನಸ್ಸಿನೊಳಗೆ ಕುಂತಿತ್ತು, ಯಾರಿಗೂ ಹೇಳಲಾರದೇ ಹಾಗೆ ಉಳಿದಿತ್ತು, ನನ್ನದೇ ಕಥೆ, ಭಾವನೆಗಳಿಗೆ ಕಾದಂಬರಿಯ ರೂಪವಾಗಿ ಮೂಡಿದಂತಿದೆ. ಇಲ್ಲಿನ “ಶಂಕರೆಪ್ಪ, ಕಾಮಾಕ್ಷಿ” ಕಾಕಾ ಚಿಗವ್ವ ಅನ್ನಸ್ತಾರೆ. “ಮೌನೇಶ, ಶೈಲಾ” ಅಣ್ಣಾ ವೈನಿ ತರಹ ಕಣ್ಣ ಮುಂದೆ ಮರುರೂಪ ಪಡೆದುಕೊಂಡ ಹಾಗೆ ಎಲ್ಲವನ್ನು ಬೆಸದು, ಹೊಸದು ಅನುಭವದಿಂದ ಬುದ್ಧಿ ಹಾಗೂ ಜವಾಬ್ದಾರಿಯನ್ನು ಸೇರಿಸಿ ಬೆಳದ ಮೊಮ್ಮಕ್ಕಳಿಗಿ ಅಜ್ಜ ಕಥೆ ಹೇಳಿದ ಹಾಗೆ ಆಪ್ತ ಎನ್ನಿಸಿತು ಈ ಕಾದಂಬರಿ
ಇಲ್ಲಿನ ಕಥಾನಾಯಕ ತನ್ನ ನ್ಯೂನ್ಯತೆಯ ಬಗ್ಗೆ ಕಿಳಿರಿಮೆಯಿಂದ ಬಳಲುತ್ತಿರುತ್ತಾನೆ. ತನ್ನದಲ್ಲದ ತಪ್ಪಿನಿಂದ ಅವಮಾನ ಎದುರಿಸ ಬೇಕು, ಯಾಕೆ ಹೀಗೆ? ಅದನ್ನು ಮೀರಿ ನಿಲ್ಲಲು ಬೇರೆ ಯಾವುದೂ ದಾರಿ ಕಾಣದಿದ್ದಾಗ ಅದನ್ನು ಆಕ್ರೋಶದಿಂದ ಎದುರಿಸಬೇಕು, ಇಲ್ಲ ಅವಮಾನಗಳಿಂದ ಕುಗ್ಗಿ ಹೋಗಬೇಕು. ಎದುರಿಸಲು ಯಾವುದೇ ಶಕ್ತಿ ಇಲ್ಲದಿದ್ದಾಗ ಕುಗ್ಗಿ ಹೋಗುವುದೇ ಜಾಸ್ತಿ. ಇಂತಹ ಪರಿಸ್ಥಿತಿಯಲ್ಲಿ ಯಾವ ಬಾಹ್ಯ ಶಕ್ತಿಗಳ ಆಶ್ರಯ ಇಲ್ಲದೇ ಎಲ್ಲವನ್ನೂ ಮೀರಿ ಬೆಳಿತಾನಲ್ಲಾ ಅದು ತುಂಬಾ ದೊಡ್ಡದು. ಅದು ಈ ಕಾದಂಬರಿಯೊಳಗ ಸೀಳುತುಟಿಯ ರೂಪಕವಾಗಿ ಬಂದಿದೆ ಅಷ್ಟೆ.

“ಕುರಸಾಲ್ಯಾ ದೇವ್ರು ತಾನ ತಿದ್ದಿತೀಡಿ, ಹೊಡಮಳ್ಳಿ ತಾನ ನೆದರ ಹಚ್ಚಿ ಹಿಂಗ್ ಮಾಡಿ ಕಳಸ್ಯಾನೇನೋ ನನ್ನ ಮೊಮ್ಮಗನ್ನ, ಏನ ಚಂದ ನನ್ನವ್ವಾ ನನ್ನ ಕೂಸು” ಎನ್ನುವಾಗಿನ ಮಮತೆ, ಜೆ.ಜೆ.ಫೈನ್ ಆರ್ಟ್ಸ್ ಕಾಲೇಜಿನಂತ ಪ್ರತಿಷ್ಟಿತ ಸಂಸ್ಥೆಯೊಳಗೆ ಪ್ರಾಧ್ಯಾಪಕನಾದಾಗ “ಮಾಸ್ತರಕಿ ಮಾಡಾಕ ಅಂಥಾ ದೊಡ್ಡ ಶಹರಕ್ಕ ಯಾಕ್ ಹೋಬೇಕು? ಸುಮ್ನ ಖರ್ಚ ಜಾಸ್ತಿ” ಎನ್ನುವಾಗಿನ ಮುಗ್ಧತನ, “ನಿನ್ನ ಸಮಂದ ಭಾಳ ತಪಾ ತಗದಾಳಪ್ಪಾ ನಿಮ್ಮವ್ವ, ನಿನ್ನ ಇಷ್ಟ ದೊಡ್ಡೋನ್ ಮಾಡಿ ತಾ ಹೆಂಗ ಕೂಸ ಆಗ್ಯಾಳ ನೋಡೀಗ..” ಎನ್ನುವಲ್ಲಿನ ಅಸಹಾಯಕತೆ ಇವೆಲ್ಲ ಮನಸ್ಸಿಗೆ ನಾಟುವಹಾಗೆ ಬಿಡಿಸಿಕೊಟ್ಟಿದ್ದಾರೆ ಲೇಖಕರು.
ಈ ತರಹದ ಸೊಗಡಿನ ಕಥೆಗಳನ್ನ ಮತ್ತೆ ಮತ್ತೆ ತುಂಬಿ ಕೊಡ್ತಾ ಇದ್ರೆ, ಗೋಟಾಯಿಸಿ ಕುಡಿಯು ಉಮೇದಾರ ನಮ್ಮದು, ಒಟ್ಟಿನಲ್ಲಿ ಮುಕ್ಕು ಚಿಕ್ಕಿಯ ಕಾಳಿನಲ್ಲಿ ಜವಾರಿ ಬೆಳೆ ತೆಗೆದಿದ್ದಾರೆ ಲೇಖಕರು, ಹೇಳಲು ಇನ್ನಷ್ಟು ಬಾಕಿ ಇದೆ.

ಕಾದಂಬರಿ - ಮುಕ್ಕು ಚಿಕ್ಕಿಯ ಕಾಳು
ಲೇಖಕಿ - ಜಯಲಕ್ಷ್ಮಿ ಪಾಟೀಲ Jayalaxmi Patil
ಪ್ರಕಾಶಕರು - ಅಂಕಿತ ಪುಸ್ತಕ ಬೆಂಗಳೂರು.
ಬೆಲೆ – 130 ರೂಪಾಯಿ.

No comments:

Post a Comment