Saturday, October 12, 2019

ಛೇದ

ಸಾಹಿತ್ಯ ಪ್ರಿಯರಲ್ಲಿ ಯಶವಂತ ಚಿತ್ತಾಲರ ಬಗ್ಗೆ ಒಂದು ಮಾತಿದೆ ಓದುಗನಿಗೆ ನಿರಾಸೆ ಮಾಡದೇ ಬರೆದ ಲೇಖಕ ಎಂದು. ನಿಜ ಅವರ ಕಥೆ/ಕಾದಂಬರಿಗಳೆಂದರೆ ಹೊಸದೊಂದು ಲೋಕಕ್ಕೆ ಪ್ರವೇಶ ದೊರೆತಂತೆ. ಅವರ ಕಥೆಗಳಲ್ಲಿ ನಮ್ಮನಿಮ್ಮಂತೆ ಪಾತ್ರಗಳಿದ್ದರೂ ಅದನ್ನು ಓದುವಾಗ ಅಪರಿಚಿತವಾದ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಒಬ್ಬ ಬರಹಗಾರ ತನ್ನ ಕೃತಿಗಳ ಮೂಲಕ ಯಶಸ್ವಿಯಾಬೇಕಾದರೆ ಓದುಗನಿಗೆ ಹೊಸತನವನ್ನು ಕೊಡಬೇಕು. ಕ್ಲೀಷೆ ಎನ್ನುವುದು ಓದುಗರನ್ನು ಬಹು ಬೇಗ ಬೊರುಹೊಡೆಸುವಂತದ್ದು. ಓದುಗನ ಉದ್ದೇಶವೇ ಆ ಓದಿನಿಂದ ಏನನ್ನಾದರು ಹೊಸದು ತಿಳಿದುಕೊಳ್ಳಬೇಕೆಂಬ ಬಯಕೆ. ಇದೊಂದು ಮಾತ್ರ ಓದುಗನಿಗೆ ಲಾಭ. ಆದರೆ ಇದನ್ನು ಓದುಗರಿಗೆ ನೀಡಬೇಕಾದರೆ ಲೇಖಕ ಹೊಸದ್ದೇನಾದರೂ ತಿಳಿದಿರಬೇಕು, ಹೇಳುವುದರಲ್ಲಿ ಹೊಸತನವಿರಬೇಕು. ಅಂತಹ ಹೊಸತನ, ತಾಜಾತನ ಚಿತ್ತಾಲರ ಬರಹಗಳಲ್ಲಿದೆ. 

ಅವರ ಪ್ರಸಿದ್ದ ಕಾದಂಬರಿಯಾದ ಛೇದ ಕೂಡ ಚಿತ್ತಾಲರ ವೈಶಿಷ್ಟ್ಯದಿಂದ ಕೂಡಿದೆ. ನಾವು ತಿಳಿದೋ/ತಿಳಿಯದೆಯೋ ಉಂಟಾಗುವ ಭಯದಿಂದ ಉಂಟಾದ ಸಂಶಯ ಸಂಬಂಧಗಳನ್ನು ಹೇಗೆ ಕೊಂದಪ ಹಾಕುತ್ತದೆ. ಭಯ, ಸಂಶಯ, ಸಿಟ್ಟು ಇವುಗಳನ್ನು ಒಬ್ಬ ವ್ಯಕ್ತಿಯ ಮೇಲೆ ಜೀವನದುದ್ದಕ್ಕೂ ತೋರಿಸುವುದು ಅಸಾಧ್ಯ ಎನ್ನುವುದನ್ನು ತಿಳಿದುಕೊಳ್ಳುವ ಹೊತ್ತಿನಲ್ಲಿ ಜೀವನವೇ ಮುಗಿದು ಬಿಡುತ್ತದೆ. ಹೀಗಾಗಿ ನಾವು ಒಡೆದ ಮನಸ್ಸುಗಳಿಂದ ಜೀವಿಸುತ್ತಿದ್ದೇವೆ. ಸಮಾಜದಲ್ಲಿ ಕ್ರೌರ್ಯ ಅನ್ನುವುದು ಮಿತಿಮೀರಿ ಮನುಷ್ಯ ಮನುಷ್ಯರು ಮುಖ ನೋಡಿ ಮಾತಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಬ್ಬನನ್ನು ಕೊಲ್ಲುವುದು ಯಾಕೆ ತಪ್ಪು? ಎಂಬ ಪ್ರಶ್ನೆಗೆ ಅದು ಕಾಯದೆಗೆ ವಿರುದ್ದವಾದದ್ದು, ಪೋಲೀಸರು ಹಿಡಿಯುತ್ತಾರೆ ಎಂದು ಉತ್ತರ ಕೊಡಬೇಕಾಗುವಂಥ ಹಾಸ್ಯಾಸ್ಪದ ಸ್ಥಿತಿಗೆ ಬಂದಿದ್ದೇವೆ ಅಲ್ಲವೆ? ಎಲ್ಲಿಯವರೆಗೆ ನಾವು ವಾಸ್ತವವನ್ನು ವಾಸ್ತವವಾಗಿಯೆ ಗ್ರಹಿಸುತ್ತೇವೋ ಅಲ್ಲಿಯವರೆಗೆ ನಾವು ಅದನ್ನು ಸುಲಭವಾಗಿ ಎದುರಿಸಬಲ್ಲೆವು. ಅಂಥ ಶಕ್ತಿ ಮನುಷ್ಯನಿಗೆ ಇದೆ. ಎಲ್ಲ ಪ್ರಾಣಿಗಳ ಹಾಗೆಯೇ ಅವನಿಗೆ ಅದು ನಿಸರ್ಗದತ್ತವಾದದ್ದು. ಎಂಬುದನ್ನು ವಿವರಿಸುತ್ತಾ ಮರೆಯಲ್ಲಿ ನಡೆಯುವ ಕ್ರೌರ್ಯಗಳಿಂದ "ಕೋಯಿ ಬಚಾವ್" ಎಂಬ ಕೂಗು ಕಾದಂಬರಿ ಮೂಲಕ ಪ್ರತಿದ್ವನಿಸುತ್ತದೆ. ಈ ಕಾದಂಬರಿ 1985ರಲ್ಲಿ ಬರೆದಿದ್ದರೂ ಇಂದಿಗೂ ಪ್ರಸ್ಥುತ ಎನ್ನುವಂತೆ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ.
ಚಿತ್ತಾಲರು ತಮ್ಮ ಬರವಣಿಗೆಯ ಬಗ್ಗೆ ಅವರೇ ಹೇಳುವಂತೆ “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ನಾನು ನಾನಾಗಿಯೇ ಉಳಿದು ಉಳಿದವರಿಂದ ಬರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ”. ಈ ಮಾತು ಕಾದಂಬರಿ ಮುಗಿದ ಮೇಲೆ ನೆನಪಿಗೆ ಬರದೇ ಇರಲ್ಲ. ಅಸಲಿಗೆ ಸಾಹಿತಿ/ಸಾಹಿತ್ಯ ಅಂದ್ರೆ ಇದೇ ಅಲ್ವ!?

ನನ್ನಿ - ಕರಣಂ ಪವನ ಪ್ರಸಾದ

ನನ್ನಿ ಇದು ಕರಣಂ ಪವನ ಪ್ರಸಾದರ ಎರಡನೇ ಕಾದಂಬರಿ. ಮೊದಲ ಕಾದಂಬರಿ ಕರ್ಮ ಹಾಗೂ ಮೂರನೆ ಕಾದಂಬರಿ ಗ್ರಸ್ತ ತುಂಬಾ ದಿನದ ಹಿಂದೆ ಓದಿ ತುಂಬಾ ಮೆಚ್ಚಿಕೊಂಡಿದ್ದೆ ಅನಿವಾರ್ಯ ಕಾರಣಗಳಿಂದ ಈ ಕಾದಂಬರಿ ಹಾಗೇಯೆ ಉಳಿದುಕೊಂಡು ಬಿಟ್ಟಿತ್ತು.
ಜಗತ್ತಿನಲ್ಲಿ ಯಾವುದೇ ಜಾಗವಿರಲಿ, ದೇಶವಿರಲಿ ಅಲ್ಲಿ ಬೇರೆ ಧರ್ಮದ ಜನರ ಬಗ್ಗೆ ಅಲ್ಲಿನ ಪರಿಸರದ ಬಗ್ಗೆ ಅವರ ದಿನ ನಿತ್ಯದ ಚಟುವಟಿಕೆಗಳ ಬಗ್ಗೆ ಗಮನಿಸಿದಾಗ ಅಲ್ಲೊಂದು ಅಪರಿಚಿತ ಭಾವ ನಮ್ಮಲ್ಲಿ ಮೂಡುತ್ತದೆ. ಅಲ್ಲೇನೋ ಹೊಸತನದ ಅನುಭವವಾಗುತ್ತದೆ. ಹಾಗೆನೇ ಅಲ್ಲಿನ ಜನರಿಗೂ ಬೆರೆಯದನ್ನು ನೋಡಿದಾಗ ಹಾಗೇಯೆ ಅನ್ನಿಸಬಹುದು. ಅದು ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿ, ಪ್ರಾದೇಶಿಕವಾಗಿ, ಭಾಷಿಕವಾಗಿ ಹೀಗೆ ಹಲವು ವೈವಿದ್ಯತೆಯಲ್ಲಿಯೂ ಅನುಭವಕ್ಕೆ ಬರುವಂತದ್ದು. ಈ ತರಹದ ಅನುಭವ ನನಗೆ "ನನ್ನಿ" ಕಾದಂಬರಿ ಓದುವಾಗ ಆಯಿತು ಎಂದು ಹೇಳಬಹುದು. ಯಾವುದೋ ಅಪರಿಚಿತ ದಾರಿಯಲ್ಲಿ ಸಂಚಾರಮಾಡಿದಂತಾಯಿತು. ಆದರೆ ದಾರಿಯುದ್ದಕ್ಕೂ ಹೊಸತನದ ಭಾವ, ಅಪರಿಚಿತ ತನದಲ್ಲೂ ಅಪರೂಪತೆ ಎದ್ದು ಕಾಣಿಸುತ್ತದೆ. ಕೈ ಹಿಡಿದು ಕರೆದುಕೊಂಡು ಹೋಗಿ ನಮ್ಮ ದಾರಿ ಹೀಗಿದೆ. ದಾರಿಯುದ್ದಕ್ಕೂ ನಮ್ಮಲ್ಲಿ ಹೀಗೆ-ಹೀಗೆ ಇದೆ ಎಂದು ಹಲವು ರೂಪಕಗಳನ್ನು ತೋರುಸುತ್ತಾ ಹಿಡಿಯಲ್ಲಿ ಇಡಿಯನ್ನು ತೋರುಸುತ್ತಾರೆ.
"ನನ್ನಿ" ಕಾದಂಬರಿ ಬಗ್ಗೆ ಹೇಳಬೇಕೆಂದರೆ ನನ್ ಒಬ್ಬರ ಬದುಕಿನ ಮೇಲೆ ಬೆಳಕು ಚೆಲ್ಲಿ ಅದಲ್ಲಿ ಚರ್ಚ್'ನ, ಕ್ರಿಶ್ಚಿಯವ್ ಮಿಷನರಿಗಳ ವ್ಯವಸ್ಥೆಯನ್ನು ನಮಗೆ ಕಾಣಿಯುತ್ತಾರೆ. ಕಾದಂಬರಿಯುದ್ದಕ್ಕೂ ಎಲ್ಲ ಪಾತ್ರಗಳನ್ನು ಲೇಖಕರೇ ನಿರೂಪಿಸುತ್ತಾ ಹೋಗುತ್ತಾರೆ. ಬಡತನವೋ ಮತ್ತೊಂದು ಮೂಲಭೂತ ಭಾತ್ಯತೆಗಳಿಂದ ಮತಾಂತರಕ್ಕೆ ಕಾರಣವಾಗುವ ವ್ಯವಸ್ಥೆ, ಮಿಷನರಿಗಳು ದೇವರ ಹೆಸರಿನಲ್ಲಿ ಸಮಾಜಕ್ಕೆ ಮಾಡುವ ಮೋಸ, ಎಲ್ಲದಕ್ಕೂ ದೇವರನ್ನು ತಂದು ಪ್ರಶ್ನಿಸುವವರ ಬಾಯಿ ಕಟ್ಟಿಸುವ ಜಾನತನದ ನಡೆ, ಸಮಾಜಿಕ ಸೇವೆಯೆಂಬ ಮುಖವಾಡದಿಂದ ತಮ್ಮತನವನ್ನು ಸಾಧಿಸಿಕೊಳ್ಳಲು ಅಸಹಾಯಕರ ಬಲಿಪಶು ಇನ್ನೂ ಅನೇಕ ವಿಷಯಗಳನ್ನು ಇಟ್ಟುಕೊಂಡು ಸತ್ಯಶೋಧನೆಯನ್ನು ಈ ಕಾದಂಬರಿ ನಡೆಸುತ್ತದೆ. ಇದು ಕೇವಲ ಒಂದು ಧರ್ಮ ಇಟ್ಟುಕೊಂಡು ಅದರ ಹೆಸರಿನಿಂದ ಮಾಡುವ ಭ್ರಷತೆಯನ್ನು ತೋರಿಸುವುದಲ್ಲ, ಇಲ್ಲಿ ಕ್ರಿಶ್ಚಿಯನ್ ಧರ್ಮ ರೂಪಕ ಅಷ್ಟೆ. ಇತರಹದ ಆಂತರಿಕ ಹುಳುಕುಗಳು ಎಲ್ಲ ಧರ್ಮದ ಹೆಸರಿನಲ್ಲಿಯೂ ನಡೆಯುತ್ತವೆ. ಆ ದೃಷ್ಟಿಯಿಂದ ನೋಡಿದರೆ ನಿಜವಾಗಲೂ ಇದೊಂದು ಸತ್ಯಶೋಧನೆಯ ಕಾರ್ಯವೇ ಸರಿ. ಧರ್ಮದ ಮೂಲಭೂತ ಅಂಶಗಳು ಧರ್ಮವನ್ನು ವ್ಯಾಖ್ಯಾನಿಸುವುದಕ್ಕಿಂತ ಧರ್ಮಸಂಸ್ಥೆಗಳು ತಮ್ಮ ಸ್ವಾರ್ಥತೆಯ ದೃಷ್ಟಿಯಿಂದ ಧರ್ಮವನ್ನು ವ್ಯಾಖ್ಯಾನಿಸುತ್ತಿರುವುದು ಸಮಾಜದಲ್ಲಾಗುವ ಮೂಢನಂಬಿಕೆಗಳಿಗೆ ಕಾರಣ ಎಂದು ಎನಿಸದೇ ಇರದು, ಇದು ಸತ್ಯವೂ ಸರಿ. ಫಾಬ್ರಿಗಾಸ್ ಇಲ್ಲಿ ಸತ್ಯಶೋಧನೆಯ ರೂಪಕವಾಗಿ ಬರುತ್ತಾನೆ. ಹೂಗೆ ಕಾದಂಬರಿ ಓದಿದ ಮೇಲೆ ಹಲವು ಪ್ರಶ್ನೆಗಳು ಮೂಡಿ ನಮ್ಮಿಂದ ನಮಗೇ ಉತ್ತರಗಳನ್ನು ನಿರೀಕ್ಷಿಸುವಂತೆ ಮಾಡುತ್ತವೆ. ಉತ್ತಮವಾದ ಕೃತಿ ಇಷ್ಟ ಆಯ್ತು.

ಕುಡ್ಪಲ್ ಭೂತ

ಭೂತ ಎನ್ನುವ ಕಲ್ಪನೆ ಅವಿಭಜಿತ ದಕ್ಷಿಣ ಕನ್ನಡ (ತುಳುನಾಡು) ಜನರಿಗೆ ಇರುವಷ್ಟು ಪರಿಚಯ ಬೇರೆ ಕಡೆಗೆ ಸಿಗಲಿಕ್ಕೆ ಅಸಾದ್ಯ. ಬೇರೆ ಕಡೆಗಳಲ್ಲಿ ಭೂತ ಎಂದರೆ ಅದೊಂದು ದುಷ್ಟ ಶಕ್ತಿ ಎನ್ನುವ ಸಿದ್ದಕಲ್ಪನೆ ಇದೆ. ಆದರೆ ಇಲ್ಲಿ ಅದು ಅವರು ಆರಾಧಿಸುವ ದೈವವಾಗಿಯೂ, ಅವರನ್ನು ಕಾಪಾಡುತ್ತಿರುವ ಕ್ಷೇತ್ರಪಾಲಕನಾಗಿಯೂ, ಕೆಲವೊಮ್ಮೆ ದುಷ್ಟ ಶಕ್ತಿಯಾಗಿಯೂ ಕಾಣುತ್ತಾರೆ. ಆದರೆ ಅದರಲ್ಲಿ ಬೇರೆ-ಬೇರೆ ವಿಧಗಳುಂಟು. ಕೆಲವೊಂದು ಭೂತಗಳನ್ನು ಮಾತ್ರ ದೈವಗಳೆಂದು ಪರಿಗಣಿಸಿ ಅದಕ್ಕೆ ಗುಡಿ ಕಟ್ಟಿ ಆರಾಧಿಸುವ ಒಂದು ವಿಶಿಷ್ಟವಾದ ಸಂಸ್ಕೃತಿ ಇಲ್ಲಿ ಬೆಳೆದು ಬಂದಿದೆ (ಇದನ್ನು ಕೋಲ ಅಂತ ಕರೀತಾರೆ) ಇದರ ಬಗ್ಗೆ ಅನೇಕ ಸಂಶೋದನೆಗಳೂ ನಡೆದಿವೆ. ತುಳುನಾಡ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಭೂತಗಳ (ದೈವಗಳ) ಪಾತ್ರ ಹಿರಿದು. ಹಾಗಾಗಿ ಇಲ್ಲಿನ ಜನರು ಎಲ್ಲ ಭೂತಗಳಿಗೆ ಹೆದರುವುದಿಲ್ಲ. ಆದರೆ ಈ ಕಾದಂಬರಿಯಲ್ಲಿ ಉಲ್ಲೇಖವಾದ "ಕುಡ್ಪಲ್ ಭೂತ" ಇದು ತುಳುನಾಡಲ್ಲಿ ಆರಾಧಿಸುವ ದೈವವಲ್ಲ (ಭೂತ). ಇದೊಂದು ಹೆಣ್ಣು ಭೂತ. ಇದು ಹಿಂದಿನಿಂದಲೂ ನಂಬಿಕೊಂಡು ಬಂದ ಭೂತವಾದರೂ ಇದಕ್ಕೆ ಅಷ್ಟೇನೂ ಮಹತ್ವ ಕೊಟ್ಟಿಲ್ಲ. ಹಿಂದಿನ ಕಾಲದಲ್ಲಿ ಸತಿ ಹೋಗುತ್ತಿದ್ದ ಪತಿವ್ರತೆಯರು ಮೋಕ್ಷ ಸಿಗದೆ ಅತಂತ್ರರಾಗಿ ಭೂತ ವಾಗ್ತಾರೆ ಅದೇ ಕುಡ್ಪಲ್ ಭೂತ. ಆದರೆ ಮೋಕ್ಷ ಸಿಕ್ಕ ಸತಿಗಳು ಮಹಾಸತಿ, ಮಾಸ್ತಿಯಾಗಿ ಆರಾಧನೆ ಮಾಡುವ ದೈವಗಳಾಗುತ್ತವೆ (ಭೂತ) ಎಂಬ ನಂಬಿಕೆ. ಈ ಕುಡ್ಪಲ್ ಭೂತವನ್ನು ಉಲ್ಲೇಖವಾಗಿ ಇಟ್ಟುಕೊಂಡು ಕಾದಂಬರಿಯನ್ನು ಅನುಬೆಳ್ಳೆಯವರು (Raghavendra Rao Anu Belle) ರಚಿಸಿದ್ದಾರೆ. 

"ಕುಡ್ಪಲ್ ಭೂತ" ಇದೊಂದು ಪತ್ತೆದಾರಿ ಶೈಲಿಯ ಕಾದಂಬರಿ. ದಕ್ಷಿಣ ಕನ್ನಡ-ಉಡುಪಿ ಸುತ್ತಮುತ್ತ ಸುಮಾರು ನಲವತ್ತು ಐವತ್ತು ವರ್ಷಗಳ ಹಿಂದೆ ಇದ್ದಿರಬಹುದಾದಂತಹ ಒಂದು ಹಳ್ಳಿಯ ಚಿತ್ರಣ. ಕುಗ್ರಾಮವಾದರೂ ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಜನರ ಮುಗ್ದತನ, ಎಲ್ಲರೂ ಒಂದೇ ಮನೆಯವರೆನ್ನು ಆಪ್ತತೆ ಒಟ್ಟಿನಲ್ಲಿ ಈ ಆದುನಿಕ, ಐಶಾರಾಮಿ ಸಾಧನಗಳು ಬರುವುದಕ್ಕಿಂತ ಮೊದಲು ಹಳ್ಳಿಯ ಚಿತ್ರಣ ಹೇಗಿತ್ತು ಎಂದಾಗ ನಮ್ಮ ಕಲ್ಪನೆಗೆ ಬರತ್ತೊ ಹಾಗೆ ಇರುವ ಹಳ್ಳಿ. ಒಂದೊಮ್ಮೆ ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಮಂಗಳೂರು ಶೈಲಿಯ ಭಾಷಾ ಹದದಿಂದ ಕೂಡಿದ್ದು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ.
ಗಮನಿಸಬೇಕಾದ ಒಂದು ವಿಷಯವೆಂದರೆ ಕೆಲವೊಮ್ಮೆ ಕಾದಂಬರಿಯ ರಹಸ್ಯ ಲೇಖಕರೇ ಸಾಗುವ ದಾರಿಯಲ್ಲೇ ಬಿಟ್ಟುಕೊಡುತ್ತಾರೆ ಆದರೂ ಕುತೂಹಲವನ್ನು ತಣ್ಣಗೆ ಮಾಡದೇ ಮುಂದೆ ಕರೆದುಕೊಂಡು ಹೋಗುತ್ತದೆ.

ಒಟ್ಟಿನಲ್ಲಿ ಈ ಕಾದಂಬರಿಯ ಚಿತ್ರಣ. ಸಾಮಾನ್ಯವಾಗಿ ಹೆಚ್ಚಿನ ಜನರು ಸಾಮಾಜಿಕವಾಗಿ, ವಯಕ್ತಿಕವಾಗಿ ನಂಬಿಕೊಂಡು ಬಂದ "ಭೂತ" ಎನ್ನುವ ನಂಬಿಕೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅದು ಕೆಲವೊಮ್ಮೆ ಲಾಭದ ಉದ್ದೇಶವಿರಬಹುದು. ಬೇರೆ ಏನೂ ಮಾಡಲು ಅಸಹಾಯಕನಾಗಿ ಈ ಕೃತ್ಯ ಮಾಡಿರಬಹುದು, ಕೆಲವೊಮ್ಮೆ ಜನರನ್ನು ಹೆದರಿಸಲು, ಕಳ್ಳತನ ಮಾಡಲು ಹೀಗೆ ಅನೇಕ ಕಾರಣಗಳಿಂದ ಭೂತ ಎನ್ನು ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಈ ಕಾದಂಬರಿ ಸಾಗುತ್ತಾ ಹೋಗುತ್ತದೆ.
ಕೆಲವೊಂದು ಕಡೆ ಕಾದಂಬರಿ ಬೋರು ಹೊಡೆಯುತ್ತಾದರೂ ನಂತರದ ಕಾದಂಬರಿಯ ವೈಶಿಷ್ಟ್ಯದ ತಿರುವು, ರಂಜನೆ, ತಿಳಿ ಹಾಸ್ಯ, ರಾಜಕೀಯ ವ್ಯಂಗ್ಯ, ಕೊನೆಯವರೆಗೂ ಗಟ್ಟಿತನದಿಂದ ಸಾಗಿದ ಕಾದಂಬರಿಯ ಶೈಲಿ, ಸಮೃದ್ದವಾದ ಭಾಷೆ ಕಾದಂಬರಿಯನ್ನು ಇಷ್ಟಪಡುವ ಹಾಗೆ ಮಾಡುತ್ತದೆ.

ಕಂಬಾರರ ಶಿವರಾತ್ರಿ ಹಾಗೂ ಲಂಕೇಶರ ಸಂಕ್ರಾಂತಿ



ಚಂದ್ರಶೇಖರ ಕಂಬಾರರ ಶಿವರಾತ್ರಿ
ಕಲ್ಯಾಣ ಕ್ರಾಂತಿಯ ಸಮಯದಲ್ಲಿ ನಡೆದಿರುವ ಘಟನೆಯಾದ ಮಧುರಸ ಹಾಗೂ ಹರಳಯ್ಯನ ಗಲ್ಲು ಶಿಕ್ಷೆಯ ಮರುದಿನವನ್ನು ಕಲ್ಪಿಸಿ ಒಂದು ರಾತ್ರಿಯ ಸನ್ನಿವೇಶದಂತೆ ಚಿತ್ರಿಸಿ ಅದರಿಂದ ಇಡೀ ಕಲ್ಯಾಣ ಕ್ರಾಂತಿಯ ಸುಮಾರು ಘಟನೆಗಳು ಕಣ್ಣಮುಂದೆ ಬರುವಂತೆ ಮಾಡುವ ನಾಟಕ ಶಿವರಾತ್ರಿ. ನಿಜವಾಗಿಯೂ ವಿಭಿನ್ನವಾದ ದೃಷ್ಟಿಕೋನದಿಂದ ರಚಿತವಾದರೂ, ಒಂದು ಬೃಹತ್ ಕಾದಂಬರಿ ಸಿನೇಮಾ ಆಗಿ ಮೂರು ಗಂಟೆಯಲ್ಲಿ ಇಡೀ ಕಾದಂಬರಿಯನ್ನು ಪ್ರಸ್ಥುತ ಪಡಿಸಿದರೂ ಇನ್ನೊಮ್ಮೆ ಆ ಕಾದಂಬರಿಯನ್ನು ಓದಬೇಕು ಎನ್ನುವಂತೆ ಮಾಡುವ ಧಾಟಿಯಂತೆ ಈ ಕಾದಂಬರಿ ಭಾಸವಾಗುತ್ತದೆ. 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ನಡೆದ ಅನೇಕ ಸಂಗತಿಗಳು ಇತಿಹಾಸದಿಂದ ನಮಗೆ ಸ್ಪಷ್ಟವಾಗಿರದಿದ್ದರೂ ಕಂಬಾರರ ಈ ನಾಟಕವನ್ನು ಓದುತ್ತಿದ್ದಂತೆ ನಾವು ಒಮ್ಮತಕ್ಕೆ ಬಾರದಿದ್ದರೂ ಒಂದು ಕಥಾ ಹಂದರವಾಗಿ ಅದನ್ನು ಓದುಗ ಸ್ವೀಕರಿಸಲೇ ಬೇಕಾಗುತ್ತದೆ. ಈ ಕಥಾರೂಪದ ನಾಟಕ ಹಲವು ಕಡೆಗಳಲ್ಲಿ ನಾಟಕಿಯತೆಯ ರೂಪವನ್ನು ಪಡೆದುಕೊಂಡರೂ ಹಲವಾರು ವಾಸ್ತವ ಅನ್ನಿಸುವಂತ ಘಟನೆಗಳನ್ನು ಹಾಗೂ ವಿಚಾರಗಳನ್ನು ಹೇಳುವಲ್ಲಿ ನಾಟಕ ಯಶಸ್ವಿಯಾಗಿದೆ.
ಈ ನಾಟಕದ ಹೆಚ್ಚಿನ ಭಾಗ ನಡೆಯುವುದು ಸಾವಂತ್ರಿ ಎನ್ನುವ ಸೂಳೆಯ ಮನೆಯಲ್ಲಿ. ಈ ನಾಟಕದಲ್ಲಿ ಗಮನಹರಿಸಬೇಕಾದ ಇನ್ನೊಂದು ಅಂಶ ಎಂದರೆ ಇಲ್ಲಿಬಳಸಿದಂತಹ ಪ್ರತೀಕಗಳು. ಸಾಹಿತ್ಯದಲ್ಲಿ ಪ್ರತೀಕಗಳು ಲೇಖಕನ ವಿದ್ವತ್ತಿನ ಹಾಗೂ ಕಥಾ ತಂತ್ರ ರಚಿಸುವ ಜಾಣ್ಮೆಯ ಪ್ರತಿರೂಪ ಎನ್ನುತ್ತದೆ ಭಾರತಿಯ ಕಾವ್ಯ ಮೀಮಾಂಸೆ. ಅದಂತೆ ಈ ನಾಟಕದ ಪಾತ್ರಗಳಾಗಿರುವ ಮುಗ್ಧ ಸಂಗಯ್ಯ ಹಾಗೂ ಹುಚ್ಚಿಯ ಪಾತ್ರ. ಮುಗ್ಧ ಸಂಗಯ್ಯ ಸಾಕ್ಷ್ಯಾತ್ ಕೂಡಲ ಸಂಗಮನನ್ನೇ ಪ್ರತಿನಿಧಿಸಂತಿದ್ದರೆ ಹುಚ್ಚಿಯ ಪಾತ್ರ ನಗರದೇವತೆಯ ನಿದರ್ಶನವಾಗಿರುವುದು ಗಮನಿಸಬಹುದು. ಇವೆರಡೂ ಪಾತ್ರಗಳು ಹಾಗೂ ಸೂಳೆ ಸಾವತ್ರಿಯ ಪಾತ್ರ ಬಸವಣ್ಣ ಬಿಜ್ಜಳನ ಪಾತ್ರದಂತೆಯೇ ಮುಖ್ಯವಾಗುತ್ತದೆ. ಅದರಂತೆ ಕಾಮಾಕ್ಷಿ, ದಾಮೋದರ, ಕಳ್ಳ ಚಿಕ್ಕಯ್ಯನ ಪಾತ್ರಗಳು ನಾಟಕದ ಮೆರಗನ್ನು ಹೆಚ್ಚಿಸಿವೆ. 

ಈ ನಾಟಕದಲ್ಲಿ ಇಷ್ಟವಾಗುವ ಪ್ರಸಂಗಗಳು ಹಲವಾರಿದ್ದರೂ ಈ ಒಂದು ಘಟನೆ ತುಂಬಾ ಮನಸ್ಸಿಗೆ ನಾಟಿತು. ಸೂಳೆ ಸಾವಂತ್ರಿ ತಾನು ಸೂಳೆತನದಲ್ಲೂ ಧರ್ಮವನ್ನು ಅನುಸರಿಸುತ್ತೇನೆ ಎನ್ನುವ ಮಾತುಗಳನ್ನಾಡಿದಾಗ ಬಿಜ್ಜಳನು ಸೂಳೆತನವನ್ನೂ ಸಮರ್ಥಿಸಿಕೊಳ್ಳುವಿಯಲ್ಲೇ ನಿನಗೆ ನಾಚಿಕೆಯಾಗುವುದಿಲ್ಲವಾ? ಎಂದಾಗ ಸಾವಂತ್ರಿ ಕೊಟ್ಟ ಉತ್ತರ-
“ಶ್ರೀಮಂತನೊಬ್ಬ ಕದ್ದ ಹಣದಿಂದ ಶ್ರೀಮಂತನಾದ ಬಗ್ಗೆ ಕೊಚ್ಚಿಕೊಂಬಾಗ, ಜನರನ್ನು ಕೊಂದು ರಾಜನಾದವನು ತನ್ನ ವಿಜಯಗಳನ್ನು ಕೊಚ್ಚಿಕೊಂಡಾಗ, ಭ್ರಷ್ಟಾಚಾರದಿಂದ ಮೇಲೇರಿದ ಅಧಿಕಾರಿ ತನ್ನ ಅಧಿಕಾರದ ಬಗ್ಗೆ ಕೊಚ್ಚಿಕೊಂಡಾಗ – ನಾಚಿಕೊಳ್ಳುವರೇ ಸ್ವಾಮಿ? ಇವರೇ ನಾಚಿಕೊಳ್ಳದೇ ಇರುವಾಗ, ಕಾಯಕ ಅಂತ ಮೈಮಾರಿ ಪ್ರಾಮಾಣಿಕವಾಗಿ ಗಳಸಿದ ಹಣ್ಣದಲ್ಲಿ ತೆರಿಗೆ ಕಟ್ಟುವ ನಾವು ಯಾಕೆ ನಾಚಿಕೊಳ್ಳಬೇಕು? ಅವರ ಜೀವನ ಶೈಲಿಯಲ್ಲಿ ಕಾಣದ ವಿಕೃತಿ ನಮ್ಮ ಜೀವನದಲ್ಲೇ ಕಾಣುತ್ತದೆ ಯಾಕೆ?”

ಸಂಕ್ರಾಂತಿ - ಪಿ.ಲಂಕೇಶ್.
ಕಂಬಾರರ ಶಿವರಾತ್ರಿಯಂತೆ ಇದೂ ಕೂಡ 12ನೇ ಶತಮಾನದ ಸಾಮಾಜಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಇಟ್ಟುಕೊಂಡು ರಚಿಸಿದ ನಾಟಕ. ಒಂದು ಘಟನೆಯನ್ನಾಧರಿಸಿ ಇಡೀ ಕಾಲದ ವಸ್ತುಸ್ಥಿತಿಯನ್ನು ಹೇಳುವ ಈ ನಾಟಕದ ಸನ್ನಿವೇಶ, ಹುಡುಗ-ಹಡುಗಿಯ ಪ್ರೇಮ ಪ್ರಕರಣ ಕೂಡ ಸಮಾಜದ ಜಾತಿಯ ಎದುರು ಎಂತಹ ತಿರುವನ್ನು ಪಡೆಯುತ್ತದೆ ಎನ್ನುವ ಸನ್ನಿವೇಶವನ್ನು ಅತೀ ಸರಳವಾಗಿ ಚಿತ್ರಿಸಿದ್ದಾರೆ. ಬಸವಣ್ಣನವರ ಕ್ರಾಂತಿಕಾರಕ ಬೆಳವಣಿಗೆ ಹಾಗೂ ಸಂಪ್ರದಾಯವಾದಿಗಳ ಆಗಮಿಕ ಸಿದ್ದಾಂತದೆದುರು ಸ್ಥಿಮಿತತೆ ಇಲ್ಲದ ಬಿಜ್ಜಳನ ತೊಳಲಾಟದ ಪರಿಸ್ಥಿತಿ ಕೂಡ ಚನ್ನಾಗಿ ಮೂಡಿಸಿದ್ದಾರೆ.

ಹುಲಿಗಳ ಜಗತ್ತಿನಲ್ಲಿ ಬಡ ಹುಲಿ, ಶ್ರೀಮಂತ ಹುಲಿ, ಪುರೋಹಿತ ಹುಲಿ, ಹೊಲೆಯ ಹುಲಿ ಇರುವುದಿಲ್ಲ. ಇದೆಲ್ಲಾ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡ ಮೇಲು ಕೀಳಿನ ಪರಿವೆಯಿಲ್ಲ. ಸೂರ್ಯ, ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ. ಆದರೆ ಮನುಷ್ಯನ ಕೈಲಿದ್ದಿದ್ದರೆ ಅದನ್ನೂ ಮಾಡಿಸುತ್ತಿದ್ದ. ಎನ್ನುವ ಮಾತು ಸಾಮಾಜಿಕ ತಾರತಮ್ಯದ ಬಗ್ಗೆ ಸಾತ್ವಿಕ ಸಿಟ್ಟು ಈ ನಾಟದಲ್ಲಿ ಪ್ರತಿದ್ವನಿಸಿದೆ.

ಪದ ಕುಸಿಯೆ ನೆಲವಿಹುದು

ಅನಿತಾ ನರೇಶ ಮಂಚಿ ಅವರ ಬರವಣಿಯನ್ನು ಓದಿದಾಗ ನನಗೆ ಆಶ್ಚರ್ಯವಾಗುವ ಸಂಗತಿ ಎಂದರೆ ಅವರು ಬದುಕನ್ನು ನೋಡಿ, ಅನುಭವಿಸಿ, ಚಿತ್ರಿಸುವ ಪರಿ ಎಷ್ಟು ಚಂದವಾಗಿ ಇರ್ತದೆ ಅಂದರೆ ಇನ್ನೊಬ್ಬರಿಗೆ ಅಸೂಯೆ (V+) ಆಗುವಷ್ಟು. ಅವರ ಕಥೆಗಳಾಗಲಿ, ಅಂಕಣಗಳಾಗಲಿ, ಹಾಸ್ಯ ಲೇಖನಗಳಾಗಲಿ ಅಥವಾ ಪಾಕಶಾಸ್ತ್ರದ ಬಗೆಗಿನ ಬರಹಗಳಾಗಲಿ ಎಲ್ಲದರಲ್ಲಿಯೂ ಒಂದು ಹೊಸತನ ಇರುತ್ತದೆ, ತಾಜಾತನ ಇರುತ್ತೆ ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾದ ವಿಷಯಗಳಲ್ಲೂ ವಿಶೇಷತೆಯನ್ನು ಹುಡುಕಿ ಆನಂದಿಸುವ ಸುಂದರವಾದ ಮನಸ್ಥಿತಿ ಇರುತ್ತದೆ. 

"ಪದ ಕುಸಿಯೆ ನೆಲವಿಹುದು" ಇವರ ಮೊದಲ ಕಾದಂಬರಿ. ಒಂದೇ ಗುಟುಕಿನಲ್ಲಿ ಓದಿ ಮುಗಿಸುವ ಪುಸ್ತಕ ಇದಾದರೂ ಆಯ್ದುಕೊಂಡ ಕಥಾವಸ್ತು, ಅದನ್ನು ನಿರೂಪಿಸಿದ ರೀತಿ, ಒಳ ಹೂರಣದ ವಿನ್ಯಾಸ ಕಾದಂಬರಿ ಮುಗಿದ ಮೇಲೂ ಅದೇ ಗುಂಗಿನಲ್ಲಿ ತೇಲುವಂತೆ ಮಾಡುತ್ತದೆ. ಕಾದಂಬರಿಯ ಮುಖ್ಯಪಾತ್ರವಾದ "ಶಾಂತಿ"ಯ ಸ್ವಗತದಿಂದಲೇ ಇಡೀ ಕತೆ ನಿರೂಪಣೆಗೊಳ್ಳುತ್ತೆ. ಕಡುಬಡತನದಿಂದ ಕೂಡಿದ ತುಂಬು ಕುಟುಂಬದಲ್ಲಿ ಹಿರಿಯಳಾಗಿ ಜನಿಸಿದ ಶಾಂತಿ ಮನೆಯ ಅಷ್ಟೂ ಕೆಲಸವನ್ನು ಮಾಡುವ ಜವಾಬ್ದಾರಿ ಹೊತ್ತಾಗ ಮದುವೆ ಮಾಡಿದರೆ ಮನೆಯ ಕೆಲಸ ಮಾಡುವವರು ಯಾರು ಎಂದು ಹೆದರುವ ಅಪ್ಪ, ಎಲ್ಲ ಕೆಲಸವನ್ನು ತಾನು ಮಾಡಿದರೂ ಅದು ಮಗನ ಕಾಲ್ಗುಣ ಎಂದಾಗ ಅವಳಿಗಾಗುವ ಬೇಸರ, ಈ ಕಷ್ಟದಿದಂದ ಹೊರ ಬರಬೇಕೆಂಬ ತುಡಿತವಿರುವಾಗಲೇ ವಯೋಸಹಜವಾಗಿ ಹುಟ್ಟಿದ ಆಕರ್ಷಣೆ ನಂತರ ಪ್ರೀತಿಯಿಂದ ತಾನು ಬ್ರಾಹ್ಮಣಳಾಗಿದ್ದರೂ ಕೆಳಜಾತಿಯೆಂದು ಗುರುತಿಸಲ್ಪಡುವ ಮನೆಕೆಲಸ ಮಾಡುವ ಚನ್ನಪ್ಪುನೊಂದಿಗೆ ಓಡಿಹೋಗಿ ಇನ್ನೆಲ್ಲೋ ಜೀವನ ರೂಪಿಸಿಕೊಳ್ಳುತ್ತಾಳೆ. ಅಲ್ಲಿ ಚನ್ನಪ್ಪು ಕೀಳುಜಾತಿಯವನಾದರೂ ಅವನನ್ನು ಒಪ್ಪಿಕೊಂಡರೂ ಅವನ ಬಂಧುಗಳನ್ನು ಒಪ್ಪಕೊಳ್ಳಲು ಅವಳ ಮನಸ್ಸು ಕೇಳುವುದಿಲ್ಲ. ಇದು ಅವನ ಗಮನಕ್ಕೆ ಬಂದು ಅವನ ದೌರ್ಜನ್ಯಕ್ಕೂ ಇಡಾಗಿ ಒಂದು ಮಗುವಿನ ತಾಯಿಯಾದರೂ ಮನೆಬಿಟ್ಟು ಬರುತ್ತಾಳೆ. ನಂತರ ಸ್ವಂತ ಮನೆಯಲ್ಲೂ ತಿರಸ್ಕರಿಸಿ ಯಾರದೊ ಸಹಾಯದಿಂದ ಮಗಳನ್ನು ದತ್ತುಕೊಟ್ಟು ಮತ್ತೊಂದು ಮದುವೆಯಾಗುತ್ತಾಳೆ. ನಂತರ ಪೆದ್ದು ಗಂಡ, ಹುಟ್ಟಿದ ಮಗುವಿನ ಅಕಾಲಿಕ ಮರಣದಿಂದ ಬೆಸತ್ತು ಹಾಗೂ ಮನೆಯ ಯಜಮಾನನ ದುಷ್ಟ ಶಕ್ತಿ ಪ್ರತಿಭಟಿಸಿ ನಂತರ ಅದನ್ನೂ ಬಿಟ್ಟು ಇನ್ಯಾವುದೋ ತಿರುವಿನಿಂದ ಮಗಳನ್ನು ದತ್ತುಕೊಟ್ಟ ಮನೆಯವರ ಆಶ್ರಯದಲ್ಲಿ ಬೆಳೆದು ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾಳೆ ಶಾಂತಿ. ಇದಿಷ್ಟು ಕಥೆಯ ಬಾಹ್ಯಚಿತ್ರಣ. ಇದಿಷ್ಟು ಸಮಸ್ಯೆ ಗಂಡಸರಿಗೆ ಬಂದಿದ್ದರೆ ಅದನ್ನು ನಿವಾರಿಸಲು ಹಲವಾರು ದಾರಿಗಳು ಸಿಗುತ್ತಿದ್ದವು. ಆದರೆ ಹೆಣ್ಣಗೆ ಕಷ್ಟಸಾದ್ಯ. ಆದರೆ ಶಾಂತಿ ಗಟ್ಟಿಗಿತ್ತಿ ನೋವನ್ನು ನುಂಗಿಕೊಂಡು ಸಮಸ್ಯೆಗಳು ಇರುವುದೇ ಮನುಷ್ಯರಿಗೆ ಬರಲಿಕ್ಕೆ, ಅದನ್ನು ಪ್ರತಿಭಟಿಸಿಯಾದರೂ, ತಪ್ಪಿಸಿಕೊಂಡಾದರೂ ಮುಂದೆ ಸಾಗುವುದು ಮನುಷ್ಯನ ಗುರಿ. ಆದರೆ ಯಾವ ಸಮಯದಲ್ಲಿ ಪ್ರತಿಭಟಿಸಬೇಕು ಯಾವ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕು ಯಾವ ಸಮಯದಲ್ಲಿ ಸಮಸ್ಯೆಯನ್ನು ಅನುಭವಿಸಬೇಕು ಎನ್ನುವುದು ಕರಗತವಾಗಿ ಬಿಟ್ಚಾಗ ಸಮಸ್ಯೆಗಳು ಅಲ್ಟು ಸುಲಭವಾಗಿ ನಮ್ಮನ್ನು ಹಿಂಸಿಸುವುದಿಲ್ಲ. 
ಬದುಕಿಗಿಂತ ಸಿದ್ದಾಂತಕ್ಕೆ ಹೆಚ್ಚು ಬೆಲೆಕೊಡುವ, ಸಿದ್ದಾಂತವನ್ನು ಓಲೈಸುವ ಸಲುವಾಗಿ ಸಮಾಜವನ್ನು ಬೈಯ್ದು, ಹೆಣ್ಣುಮಕ್ಕಳ ಸಮಸ್ಯೆಗಳನ್ನು ತೋರಿಸಲು ಇಡೀ ಗಂಡು ಜನಾಂಗವನ್ನೇ ಕೀಳಾಗಿ ಕಂಡು, ಒಂದಿಡಿ ಪಂಗಡವನನ್ನು ಶತ್ರುವನ್ನಾಗಿ ಚಿತ್ರಿಸುವ, ಹಳಸಲು ಸ್ತ್ರೀವಾದವನ್ನು ಪ್ರತಿಪಾದಿಸುವವರ ಹತ್ತಿರ ಈ ಕಥಾವಸ್ತು ಸಿಕ್ಕಿದ್ದರೆ ಏನೆನೋ ಆಗಿಬಿಡುತ್ತಿತ್ತು. ಆದರೆ Anitha Naresh Manchi ಅವರು ಸಿದ್ದಾಂತಕ್ಕಿಂತ ಹೆಚ್ಚು ಬದುಕನ್ನು ಪ್ರೀತಿಸುವವರು ಎನ್ನುವುದು ಈ ಕಾದಂಬರಿಯನ್ನು ಓದಿದಾಗ ಗೊತ್ತಾಗುತ್ತದೆ. ಬಹುಷಃ ಜೀವನಪ್ರೀತಿ ಇದ್ದವರು ಮಾತ್ರ ಈ ತರಹದ ಕೃತಿಯನ್ನು ರಚಿಸಲು ಸಾದ್ಯ. ಅವರಿಗೆ ಕಾದಂಬರಿ ಬರೆದು ಅದರಿಂದ ಇನ್ನೇನೋ ಸಾದಿಸುತ್ತೇನೆ ಎನ್ನುವ ಕೆಟ್ಟ ಆಲೋಚನೆಗಳು ಇದ್ದಂತಿಲ್ಲ. ಹಾಗೇ ಇರಬೇಕು. ಕಾದಂಬರಿಕಾರರ ಮುಖ್ಯ ದ್ಯೇಯ "ಸಮಾಜದಲ್ಲಿ ಆಗುಹೋಗುವ ವಿಷಯಗಳ್ನು ತನ್ನ ಅನುಭವದ ಚೌಕಟ್ಟಲ್ಲಿ ಹೊಸೆದು ಅದು ಓದುಗರ ಅನುಭವಕ್ಕೆ ಬರುವಂತೆ ಮಾಡುವುದು" ಇದು ಈ ಕಾದಂಬರಿಯಲ್ಲಿ ದಟ್ಟವಾಗಿ ಗೋಚರಿಸುತ್ತದೆ. ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಎಷ್ಟೊಂದು ಭಾವತೀವ್ರತೆಯನ್ನು ಪಡೆಯಬಹುದಾಗಿದ್ದ ಇಲ್ಲಿನ ಕಥಾ ನಿರೂಪಣೆ ಸಹಜವಾಗಿ ಸಾಗುತ್ತಾ ಹೋಗುತ್ತದೆ. ಇದು ಬರವಣಿಯಲ್ಲಿ ಮಾಗಿದವರಿಗೆ ಮಾತ್ರಸಾದ್ಯ. ಒಟ್ಟಿನಲ್ಲಿ ಕಾದಂಬರಿ ಇಷ್ಟವಾಯಿತು. Malini Guruprasanna ಅವರ ಚಂದದ ಮುನ್ನುಡಿ ಕಾದಂಬರಿಯನ್ನು ಇನ್ನಷ್ಟು ಸೊಗಸಾಗಿಸಿದೆ. 
ನಾನು ಮೊದಲು ಇವರ ಲೇಖನಗಳನ್ನು ಓದಿದ್ದು ವಿಜಯವಾಣಿ ದಿನಪತ್ರಿಕೆಯಲ್ಲಿ, ನಂತರ ಫೇಸ್'ಬುಕ್, ಬ್ಲಾಗ್’ನಲ್ಲಿ ಇವರ ಕತೆ ಲೇಖನಗಳನ್ನೆಲ್ಲ ಓದಿದ್ದೆ. ನಂತರ ಅವರ ಪುಸ್ತಕಗಳನ್ನೂ ತರಿಸಿ ಓದಿದ್ದೆ. ಆದರೆ ಇದೊಂದು ಇವೆಲ್ಲದಕ್ಕಿಂತ ವಿಭಿನ್ನವಾದ ಕೃತಿ. ಮುಂದೆ ಇವರಿಂದ ಇದಕ್ಕಿಂತ ಭಿನ್ನವಾದ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.

ಟೈಮ್ ಅನ್ನೂದು ಪಾತರಗಿತ್ತಿ ಇದ್ಹಾಂಗ

ಟೈಮ್ ಅನ್ನೂದು ಪಾತರಗಿತ್ತಿ ಇದ್ಹಾಂಗ. ಯಾವ ವ್ಯಾಳೆದಾಗ ಏನ್ ಆಗ್ತದೋ ಹೇಳೂದ ಬಾಳ ಕಠಿಣ. ಅಂದಾಜು ಮಾಡಬಹುದಾದರೂ ಖರಾರುವಕ್ಕಾಗಿ, ಶಂಬರ್ ಟಕ್ಕೆ ಹಿಂಗ ಆಗ್ತದ ಅಂತ ಹೇಳಾಕ್ ಎಂಥವನಿಗೂ ಶಕ್ಯ ಆಗುದಿಲ್ಲಾ. ಜೀವನ ಅಂದ್ರ ಹಂಗ ಇರ್ಬೇಕ ಬಿಡ್ರಿ, ಇಲ್ಲಂದ್ರ ಲೈಫಿನೊಳಗ ಏನ ಸ್ವಾರಸ್ಯ ಇರ್ತದ? ನಾಳೆ ಕ್ರಿಕೆಟ್ ಒಳಗ ಯಾರ ವಿನ್ ಆಗ್ತಾರ, ಮುಂದಿನ ತಿಂಗಳ ಪರಿಕ್ಷೆಯೊಳಗ ನನ್ನ ಮಗಳು ಎಷ್ಟ ಮಾರ್ಕ್ಸ್ ತಗಿತಾಳ, ಮದುವಿ ಆದಮ್ಯಾಲ ಹೆಂಡತಿ ಡಿಲೆವರಿ ನಾರ್ಮಲಾಗ್ತನೋ ಇಲ್ಲ ಸಿಜೇರಿಯನ್ ಆಗ್ತದನೋ ಎಲ್ಲಾ ಇವಾಗ ಗೊತ್ತಾಗಿ ಬಿಟ್ರ ಲೈಪ್ ಅನ್ನೂದು ತಣ್ಣಗಿನ ಚಾ ಒಳಗ ಒಣಾ ಬ್ರೆಡ್ ತಿಂದಾಂಗ ಸಪ್ಪಗ ಇರ್ತದ. ಲೈಫ್ ಒಳಗ ಥ್ರಿಲ್ ಇರ್ಬೇಕಾದ್ರ ಬದುಕ ಅನ್ನೂದು ಮುಂದ ಏನ್ ಆಗ್ತದೋ ಅಂತ ಉಹಿಸಿಕೊಳ್ಳಲಾರದಂಗ ಸಸ್ಪೆನ್ಸ್ ಕೊಡ್ತಾ ಹೋಗ್ತಿರ್ಬೇಕು.
ಎರಡ ತಿಂಗಳ ಹಿಂದ ದಿಪಾವಳಿಗೆ ಊರಿಗೆ ಹೋಗಿದ್ದೆ. ಮನ್ಯಾಗ ಅವ್ವಾ “ನಿನ್ನ ವಾರಗಿ ಹುಡುಗೂರು ಎರೆಡೆರಡ ಹಡದಾರು ನಿನಗೂ ಲಗೂನ ಲಗ್ನ ಮಾಡ್ಬೇಕು, ಇಲ್ಲಂದ್ರ ನಿನ್ನ ಮದುವಿಗೆ ಅವ್ರು ತಮ್ಮ ಮಕ್ಕಳನ ಒಡ್ಯಾಡಾಕ ಕಳಸ್ತಾರು” ಅಂತ ಅಂಜಿಕಿ ಹಾಕಿದ್ರು, ಆದ್ರ ನಾ “ಹೇ ಈಗೇನ ಅರ್ಜೆಂಟ್ ಐತಿ ತಗೋರಿ ಉಗಾದಿ ಸುತ್ತ ನೋಡಿದ್ರಾತು” ಅಂತ ಅಂದಾಗ “ಇವಾಗ ನೋಡಾಕ ಸುರು ಮಾಡಿದ್ರ ಉಗಾದಿಗಿ ಹೋಗಿ ಹತ್ತೈತಿ, ನಾ ಅರವತ್ತನಾಲ್ಕ ಹೆಣ್ಣ ನೋಡೇನಿಪಾ” ಅಂತ ದೊಸ್ತೊಬ್ಬ ದಣಿಗೂಡಿಸಿದಾ. ಇಷ್ಟ ದಿವಸ ಮದುವಿ ಆಗ್ಬೇಕು ಅಂತ ಆಸೆ ಇತ್ತಾದ್ರು ಹಿಂತಾ ಹುಡುಗಿನ ಬೇಕು, ಇಷ್ಟ ಟೈಮೊಳಗ ಮದುವಿ ಆಗಬೇಕು ಅಂತ ಏನೂ ಕಲ್ಪನಾ ಇರಲಿಲ್ಲ, ಮನ್ಯಾವ್ರ ಒತ್ತಡನಾ ಇರಲಿಲ್ಲ. ಇವಾಗ ಅವ್ರಾಗೆ ನೆನಪ ತಗದಾರ ಬಾ, ಒಂದ ಕೈ ನೋಡೇ ಬಿಡೂನು ಅಂತೇಳಿ, ಗಟ್ಟಿ ಜಿಂವಾ ಮಾಡಿ ನಾಚ್ಕೊಂತ ಯೆಸ್ ಅಂದ ಬಿಟ್ಟೆ. ನಾ ಯೆಸ್ ಅನ್ನೂದ ತಡಾ ನಮ್ಮವ್ವ ನಾಲ್ಕೈದು ಹೆಣ್ಣ ರಡಿ ಮಾಡ್ಕೊಂದ ಕುಂತಿದ್ಲು, ಹರ್ಯಾಗೊಂದು ಸಂಜಿಕೊಂದು ಅಂತೇಳಿ ಎರಡ ದಿನದಾಗ ನಾಲ್ಕ ಹೆಣ್ಣ ನೋಡೇ ಬಿಟ್ವಿ. ಎಲ್ಲಾರ ಮನ್ಯಾಗೂ ಅವಲಕ್ಕಿ ಮಸ್ತ ಮಾಡಿದ್ರ ಖರೇ ಯಾಕೋ ನಮಗ ಹೊಟ್ಟಿ ತುಂಬಿದಾಂಗ ಕಣ್ಣ ತುಂಬ್ಲಿಲ್ಲ. “ತಮ್ಮಾ ಹುಡಗ್ಯಾರ ಹೆಂಗ ಅದಾವೋ” ಅಂತ ಕೇಳಿದಾಗ “ಚಲೋ ಅದಾವು” ಅಂತ ನನ್ನ ಬಾಯಾಗ ಬರೂ ತಡಾ ಇಲ್ಲದ, ಮತ್ತ ನೋಡೂನಳಪಾ ಅಂತ ಉತ್ತರ ನಮ್ಮ ಮೆನೆವ್ರನ ಹೇಳ್ತಿದ್ರು. ನಾ ಎಲ್ಲಿ ಬಾಳ ಮಾತಾಡಿದ್ರ “ಏನ್ ಬರಗೆಟ್ಟಾನಿಂವ” ಅಂತ ನಿಮಿತಿ ಬರ್ತಾವಂತ ಸುಮ್ಮ ಆದೆ. ರಜೆ ಮುಗ್ಯಾಕ್ ಬಂತು ಯಾವ್ದು ಹುಡುಗಿ ಸೆಟ್ಟ ಆಗ್ಲಿಲ್ಲ. ನಾ ಎಲ್ಲಿ ನಮ್ಮ ದೋಸ್ತ ಹೇಳಿದಾಂಗ 60-70 ಹೆಣ್ಣ ನೋಡೂದಾಗ್ತೈತಿ ಅಂತ ಅಂಜಿಕಿ ಸುರು ಆತು. ಹೇಳಿ ಕೇಳಿ ನನಗ ಮೊದಲ ಅವಲಕ್ಕಿ ಅಂದ್ರ ಆಗಿ ಬರಾಂಗಿಲ್ಲ. ಉತ್ತರ ಕರ್ನಾಟಕದ ಕಡೆಗೆ ಹೆಣ್ಣ ನೋಡಾಕ್ ಹ್ವಾದ್ರ ಪೌನ್ಯಾರ್ಗಿ ಅವಲಕ್ಕಿ ಅಫಿಸಿಯಲ್ ಫುಡ್ ಬ್ಯಾರೆ.
ಹಂಗೂ ಹಿಂಗೂ ಹುಡುಗ್ಯಾರ ಮನಸ್ಸಿಗಿ ಬರ್ಲಿಲ್ಲ, ಮನ್ಯಾಗ ಸುಮ್ಮಸುಮ್ಮಕ ಆಶೆ ಹುಟ್ಟಿಸಿದ್ರ ಅಂತ ಬೇಜಾರಾಗಿ ಮಂಗಳೂರು ಬಸ್ ಹತ್ತಿದೆ. ಐದಾರು ಕಿಲೋಮಿಟರ್ ಹೋಗಿದ್ದಿಲ್ಲ ಪರಿಚಯದ ಡಾಕ್ಟರ್ ಒಬ್ಬರ ಕಡೆಯಿಂದ ಪೋನ್ ‘ತಮ್ಮ ಊರಿಗಿ ಬಂದಿದ್ದಂತ, ನಮ್ಮ ಪರಿಚಯದಾಗ ಒಂದ ಹೆಣ್ಣ ಐತಪಾ, ಬೆಳ್ಳಗ ಕೊಳಿ ತತ್ತಿ ಇದ್ದಾಂಗ ಅದಾಳ ಹುಡುಗಿ, ಸಾಲಿನೂ ಚಲೋ ಕಲ್ತಾಳ, ಗರೀಬ ಮಂದಿ ನೋಡ್ತಿಏನ್ ಮತ್ತ” ಅಂದ್ರು. ಮೊದಲ ನಾಲ್ಕ ಹೆಣ್ಣ ನೋಡಿ ಹೈರಾಣ ಆಗಿದ್ದ ನಾ ಮತ್ತ ವಾಪಸ್ಸ ಹೋಗಿ ನೋಡಿ ಇಷ್ಟ ಆಗ್ಲಿಲ್ಲಂದ್ರ ಬಸ್ ಚಾರ್ಜ ದಂಡ ಅಂತ ಹೇಳಿ “ವಾಟ್ಸಾಪ್ ಗೆ ಪೋಟೊ, ಬಯೊಡೆಟಾ ಕಳಸ್ರಿ ನೋಡೂನು” ಅಂತ ಹೇಳಿ ಪೋನ್ ಕಟ್ಟ ಮಾಡಿದೆ. ಐದ ನಿಮಿಷದೊಳಗ ಪೋಟೊ ಬಂತು ಹುಡುಗಿ ಚಲೋ ಇದ್ದಾಳ, ಬಯೊಡಾಟಾನೂ ಪಾಡ ಅದ ಅಂತೇಳಿ ನಮ್ಮವ್ವಗ ಪೋನ್ ಮಾಡಿದೆ. “ನೋಡ ಮಮ್ಮಿ, ಅಥಣಿಯೊಳಗ ಒಂದ ಹೆಣ್ಣ ಅದ ಅಂತ ಡಾಕ್ಟರ್ ಸಾಹೆಬ್ರ ಹೇಳ್ಯಾರು ಮೊದಲ ನೀವ ನೋಡ್ಕಂಬರಿ ಅಂದೆ. ಕೇಳಿ ಎರಡ ದಿವಸಾಗಿತ್ತ ನೋಡ್ಕೊಂಡ ಬಂದು ಪೋನ್ ಮಾಡಿದ್ರು “ಹುಡುಗಿ ಬೇಷ್ ಅದಾಳಪಾ, ಮನಿತಾನೂ ಅಡ್ಡಿಯಿಲ್ಲ ನಮಗೆಲ್ಲಾ ಇಷ್ಟ ಆಗೇತಿ ನೀ ನೋಡಿ ಪಸಂದ ಬಂತದ್ರ ಮುಂದಿಂದ ಮಾತಾಡೂನು” ಅಂದಾಗ ನನಗ ಅರ್ದ ಮದುವಿ ಆದಾಂಗ ಅನ್ನಿಸಿತು. ಯಾಕಂದ್ರ ನಮ್ಮವ್ವ ನನಗಿಂತ ಹೆಚ್ಚ ಸೌಂದರ್ಯ ಪ್ರಜ್ಞೆ ಹೊಂದ್ಯಾಳ, ತನ್ನ ಮಗಾ ನೋಡಾಕ ಜೊಕಮಾರ ತರಾಇದ್ರನೂ ರಾಜಕುಮಾರಿಗತೇ ಹುಡುಗಿನ ಬೇಕ ಅನ್ನುವಾಕಿ ಆ ಮಾತ ಬ್ಯಾರೆ ಆದ್ರ ಅಕಿ ಇಷ್ಟಪಟ್ಟಾಳಂದ್ರ ನಾ ನಿಮಿತ್ತ ಮಾತ್ರ ಬರೂದಂತ ಹೇಳಿ ಮರುದಿನಾ ಬಂದಬಿಟ್ಟೆ. ಮುಂದ ಒಂದ ವಾರದೊಳಗ ಗಟ್ಟಿ ಆತು. ದಿನಾಂಕ 15-11-2017 ರಂದು ಸಕ್ಕರಿ ಹಾಕಿದ್ದ ಸಜ್ಜಕಾ (ಕೆಸರಿ ಬಾತ್) ತಿನ್ನಕೊಂತ ಮಗದುಮ್ಮ ಮನೆತನದ ಜೇಷ್ಠ ಹಾಗೂ ಏಕೈಕ ಸುಪುತ್ರನಾದ ಚಿರಂಜಿವಿ ಶ್ರೀಶೈಲನಿಗೂ ತೋಡಕರ್ ಕುಟುಂಬದ ಜೇಷ್ಠ ಸುಪುತ್ರಿ ಚಿರಂಜಿವಿ ಕುಂಕುಮ ಸೌಭಾಗ್ಯವತಿ ರಾಜೇಶ್ವರಿಗೂ ( Rajeshwari ) ಹಿರಿಯರು ನಿಶ್ಚಯಿಸಿದ ದಿನಾಂಕದಂದು ಮದುವಿ ಮಾಡ್ಕೊಂಡ ಗುದುಮುರಿಗಿ ಬಿಳ್ರಿ ಅಂತ ಎಲ್ಲ ಗುರು ಹಿರಿಯರು, ಬಂದುಗಳು, ಪರಿವಾರದವ್ರು ಆಶಿರ್ವಾದ ಸಮೇತ ಮದುವಿ ನಿಶ್ಚಯ ಮಾಡೇ ಬಿಟ್ಟು.
ಇದ್ಯಾವ್ದು ಮುಗಿನಮ್ಯಾಲ ಬೆರಳ ಇಟ್ಕೊಳ್ಳುವ ವಿಷಯನ ಅಲ್ಲ. “ಅಲ್ಲ ನಾ ಒಂದ ಮೊಬೈಲ್ ಕವರ್ ತಗೊಳ್ಳಾಕ ಹತ್ತಿಪ್ಪತ್ತ ಅಂಗಡಿ ಅಡ್ಯಾಡಿ ಒಂದ ವಾರ ಯೋಚನೆ ಮಾಡಿ ತಗೊಳ್ಳು ಮನಸ್ಯಾ ಇಡೀ ಜೀವನದ ಜೊತೆ ಇರುವ ಹೆಂಡತಿಯನ್ನ ಒಂದ ವಾರದೊಳಗ ಯಾವ್ದು ವಿಚಾರ ಮಾಡಲಾರದ ಹೂ ಅನ್ನಲೆಪಾ ಅಂತ ಅನ್ನಸಾಕ ಸುರು ಆತು. ಮದುವಿ ಆಗಾಕೂ ಯಾವ ಆತುರ ಇರಲಿಲ್ಲ ಆದ್ರ “ಹುಡುಗಿ ಚಂದ ಅದಾಳು, ಚಲೋ ಸಾಲಿ ಕಲ್ತಾಳು, ಸರಕಾರಿ ನೌಕರಿಯೊಳಗ ಅದಾಳು, ಚಲೋ ಮನೆತನ” ಅನ್ನೂ ಈ ಯಾವ ಮಾತೂ ಬಿಡಿಯಾಗಿ-ಇಡಿಯಾಗಿ ಕೊಟ್ಟರೂ ಉತ್ತರ ಸಮಾದಾನ ಕೊಡ್ಲಿಲ್ಲ. ನಂತರ ನಾನ ಯಾವ ಟೈಮೊಳಗ ಏನ್ ಇಷ್ಟ ಆಗ್ತೈತಿ ಅಂತ ಹೇಳಾಕ್ ಬರೂದಿಲ್ಲ. ಗಾಂಧೀಜಿ ದಕ್ಷಿಣ ಆಪ್ರಿಕಾದಲ್ಲಿದ್ದಾಗ ಒಂದಿನ ರೈಲು ಪ್ರಯಾಣ ಮಾಡುವಾಗ ರಸ್ಕಿನ್ ಬರೆದ “ಅನ್ ಟು ದಿ ಲಾಸ್ಟ್’ ಕೃತಿಯನ್ನು ಓದುತ್ತಾರಂತ. ಅದು ಅವರ ಬದುಕಿನ ದಿಕ್ಕನ್ನೇ ಬದಲಿಸಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕುವಂತೆ ಪ್ರೇರಣೆ ಕೊಟ್ಟಿತಂತ. ಅದಕ್ಕಿಂತ ಮುಂಚೆ, ಅದರ ನಂತರ ಆ ಪುಸ್ತಕವನ್ನು ಲಕ್ಷಾಂತರ ಮಂದಿ ಓದ್ಯಾರ ಆದ್ರ ಯಾರಿಗೂ ಆ ತರ ಪ್ರಭಾವ ಬಿರೀದ್ದ ಇರ್ಲಿಕ್ಕಿಲ್ಲ. ಅದಕ್ಕ ಯಾವ ಪುಸ್ತಕ, ಒಂದು ನೋಟ, ಚುಟುಕು ಮಾತು, ಒಂದು ಪ್ರೀತಿಯ ಹಾರೈಕೆ, ಸಣ್ಣ ಬೈಗುಳ ಯಾವ ಸಮಯದಲ್ಲಿ ಯಾರ ಮೇಲೆ ಹ್ಯಾಂಗ ಪ್ರಭಾವ ಬೀರತೈತಿ ಅಂತ ಹೇಳಿಲಿಕ್ಕೆ ಅಸಾದ್ಯ. ಯಾಕಂತ ಗೊತ್ತಾಗೂದು ಬ್ಯಾಡ ಬಿಡ್ರಿ. ಗುರು ಮೂಲ, ನದಿ ಮೂಲ, ಪ್ರೀತಿ ಮೂಲ ಹುಡುಕಬಾರದಂತ ಒಂದ ವೇಳೆ ಅದರ ಮೂಲ ಗೊತ್ತಾದ್ರ ಅಲ್ಲೇನೂ ಸ್ವಾರಸ್ಯ ಇರೂದಿಲ್ಲ, ಮೂಲ ಸಿಕ್ಕ ಇಷ್ಟನ? ಅಂತ ಮನಸ್ಸ ಅತೃಪ್ತಾಗಿ ಒಂತರಾ ಉಡಾಪೆ ಆಗಿ ಬಿಡ್ತೈತಿ.
“ನಾ ನಿಮಗ ಇಷ್ಟ ಆಗೇನ್ರಿ?” ಅಕಿ ನನ್ನೊಟ್ಟಿ ಆಡಿದ ಮೊದಲ ಮಾತು. ಇವತ್ತಿಗೂ ನೆನಪಾದ್ರು ಕಿಂವ್ಯಾಗ ಗುಂಗಿ ಹುಳದಾಂಗ ಗುಂಯ್ ಗುಟ್ಟತಿರ್ತದ. ಆ ಒಂದು ವಾಕ್ಯ “ಮದುವಿ ಆದ್ರ ಇಕಿನ ಆಗ್ಬೇಕು” ಅಂತ ಡಿಸೈಡ್ ಮಾಡುವಂಗ ಮಾಡಿತ್ತು ಅಷ್ಟ ಮುಗ್ದವಾಗಿತ್ತು ಆ ಮಾತು. ಅಂದಿನಿಂದ ಅಂದಿನಿಂದ ಇಂದಿನ ತನಕ ನನ್ನ ದಿನದ ಭಾಗ ಇಕೆ. ಮಾತು, ಹರಟಿ, ಸಂತೋಷ, ನೋವು, ಹಾಡು, ಚರ್ಚೆ, ಸಂವಾದ, ಕುಟುಂಬ ಒಟ್ಟಿನ್ಯಾಗ ನನ್ನ ದಿನಚರಿಯ ಕೊನೆಯ ಸಾಲಿನ ತನಕ ಈಕಿ ಪಾಲ ಪಡ್ದಾಳು. ಎಲ್ಲಾ ಬಿಟ್ಟ ಈ ಜೋಡಿನ ಮಾತಾಡ್ಕೊಂತ ಕುಂತಿರ್ತಾನ ಅನ್ಬಾಡ್ರಿ ಮತ್ತ, ಬ್ಯಾರೆ ಕೆಲಸಾನೂ ಮಾಡ್ತೀನ್ರಪಾ.
ಹೊಸಾ ಜೋಡಿ ಹಿಂಗ ನಕ್ಕೊತ ಇರ್ತಿ ಅಂತ ಆಶಿರ್ವಾದ ಮಾಡಿಬಿಡ್ರಿ ನೋಡೂನು.

ಬಯಲಾಗಿನ ಒಂಟಿ ಮಠ

 ಬ್ಯಾಚುಲರ್ ಗಂಡಮಕ್ಕಳಿಗೂ ಅಡಗಿ ಮನೀಅಂದರ ಒಂತರಾ ಗಂಡನ ಮನಿ ಇದ್ಹಾಂಗ್ಒಂತರಾ ಬ್ಯಾಸರತುಂಬಿದ ಪ್ರೀತಿಅದನ್ನ ಕಂಡ್ರ ಇಷ್ಟ ಆಗುದಿಲ್ಲಾ, ಆದ್ರೂ ಅದನ್ನ ಬಿಟ್ಟ ನಿರ್ವಹ ಇಲ್ಲಹೆಣ್ಣಮಕ್ಕಳಿಗಿ ತವರಮನಿ ಬಿಟ್ಟ ಗಂಡನಮನಿಗೆ ಹೊಗಾಗ ಹ್ಯಾಂಗ್ ಬ್ಯಾಸರ ಇರ್ತದೋ ಹಂಗ  ಬ್ಯಾಚುಲರ್ ಗಂಡಮಕ್ಕಳಿಗೂ ಅಷ್ಟ ಬ್ಯಾಸ್ರಆದರ ಇಬ್ಬರಿಗೂ ಸುಸುತ್ರಾಗಿ ದಿನಾಕಳಿಬೇಕಂದ್ರ ಹೋಗ್ಲೇಬೇಕ  ಮಾತ ಬ್ಯಾರೆ.
 ಬ್ಯಾಚುಲರ್ ಹುಡ್ಗೂರ್ ಅಂದ್ರ ಒಂತರಾ ಆಲಸ್ಯ ಮನಸ್ಯಾರುಯಾವುದನ್ನೂ ಕರೆಕ್ಟ್ ಡೈಮ್ ಒಳಗ ಮಾಡೂದಿಲ್ಲ.ಇನ್ನೊಂದ ಸ್ವಲ್ಪ ಬಿಟ್ಟ ಮಾಡಿದ್ರ ಆತಳಪಾ ಅಂತ ಟೈಮ್ ಕೊಲ್ಲೂದು ಅವ್ರಿಗಿ ರೂಢಿ ಆಗಿಬಿಟ್ಟಿರ್ತೈತಿಎಲ್ಲಾ ಕೆಲ್ಸಾ ಒಮ್ಮಿಗೆ ಕುತ್ತಿಗೆಮಟಾ ಬಂತಪಾ ಅಂತಂದ್ರ ಅವ್ರ ಓಡ್ಯಾಡಿ ಮಾಡೂದ ನೋಡ್ಬೇಕ್ರಿ ಒಂತರಾ ಮಜಾ ಇರ್ತೈತಿವರ್ಷದ ತುಂಬ ಎಂದೂಓದಲಾರದ ಮನಸ್ಯಾ ಎಕ್ಸಾಮ್ ಟೈಮ್ ಮುಂಚಿನ ದಿನಾ ಹಗಲಾ ರಾತ್ರಿ ಹ್ಯಾಂಗ ಕಣ್ಣಿಗಿ ಕಣ್ಣಬಡಿಲಾರದಂಗ ಓದತಾನಲಾ ಹಂಗಗಡಿಬಿಡಿಯೊಳಗ ಹರಕ-ಬರ್ಕ ಕೆಲ್ಸಾ ಮಾಡಿ ದೊಡ್ಡ ಟಾರ್ಗೇಟ್ ರೀಚ್ ಆದಾವ್ರ ತರಾ ಪೋಸ್ ಕೊಡೂದು.
 ಬ್ಯಾಚೂಲರ್ ಹುಡ್ಗೂರಿಗಿ ತಮ್ಮ ದಿನನಿತ್ಯದ ಜೀವನದೊಳಗ ಕಷ್ಟದ ಕೆಲಸಾ ಅಂತ ಲಿಸ್ಟ್ ಮಾಡ್ಕೋತ ಬಂದ್ರ ಟಾಪ್ಎರಡರೊಳಗ ಬಟ್ಟೆ ತೊಳಿಯೂದು ಮತ್ತ ಅಡುಗೆ ಮಾಡೂದುಇವೆರಡೂ ಹಂತವೇನ ಗುಡ್ಡ ಕಡೀಯೂದ ದಂದೆ ಅಲ್ಲಾದ್ರೂಮಾಡಾಕ್ ಬ್ಯಾಸ್ರಯಾಕಪಾ ಹಿಂಗ ಅಂತ ಕಾರಣ ಹುಡ್ಕೋತ ಹ್ವಾದ್ರ ಮತ್ತ ಅದ ಆಲಸ್ಯಯಾವ ಜನ್ಮದಾ ನಾವ ಏನ ಪಾಪಾಮಾಡಿದ್ವೋ ಎನೋ  ಜನ್ಮದಾ ನಮ್ಮನ್ನ ಬ್ಯಾಚಲರ್ ಮಾಡಿ ಇಟ್ಟಾನ ದೇವ್ರ ಅಂತ ಒಳಗೊಳಗ ಬೈಕೊಂಡ್ರೂ ಎಲ್ಲಾರ ಮುಂದಇದ ಅಗ್ದಿ ಚಲೋ ಲೈಫ್ ಅದ ಅಂತ ದಿಮಾಕ್ ತೊರರ್ದೂದು ನಮ್ಮಂತ ಬ್ಯಾಚುಲರ್ ಹುಡುಗೂರ ದಿನಚರಿ.
ನಮ್ಮ ಬ್ಯಾಚಲರ್ ಹುಡ್ಗೂರ ಅಡಗಿ ಮನೀ ನೋಡ್ಬೇಕ್ ಒಂತರಾ ಬೈಲಾಗಿನ ಒಂಟಿ ಮಠಾ ಇದ್ಹಾಂಗನೋಡಾಕ್ಎನೂ ಕಾನ್ಸಲಿಲ್ಲಾ ಅಂದ್ರೂ ಎಲ್ಲಾ ಅದರಾಗ ಮೆಂಟೈನ್ ಮಾಡ್ತೀವಿಒಂದ ಕುಕ್ಕರ್ಒಂದ ಬೊಗನಿಎರಡ ತಾಟಚಮಚೆಗೊಳಇದ್ರೂ ಇದ್ವು ಇಲ್ಲಾಂದ್ರ ಇಲ್ಲಜೀರಿ ಸಾಸಿವೆ ಸೇರ್ಸಿದ ಒಂದ ಡಬ್ಬಿಖಾಲಿಯಾಗಿದ್ದ ಬಿಸ್ಲೇರಿ ಬಾಟಲಿಯೊಳಗ ಅರ್ದಾ ತುಂಬಿದ್ದಅಡುಗಿ ಎಣ್ಣಿಉಪ್ಪಿನ ಪಾಕೀಟ್ಎಮ್.ಟಿ.ಆರ್ ಸಂಬಾರ ಮಸಾಲಾದ್ದು ಒಂದ ಚೀಟಿಎರಡ ಕಿಲೋ ರೈಸ್ಒಂದ ಕೆಜಿಉಳ್ಳಾಗಡ್ಡಿಅರ್ದಾ ಕೇಜಿ ಟೊಮೆಟೋಇದ ನಮ್ಮ ಅಡುಗಿ ಮನಿ ದಲಬಾರಇಷ್ಟ ಇಟ್ಕೊಂಡ ಹ್ಯಾಂಗ್  ಲೈಪ್ ಮೆಂಟೈನ್ಮಾಡ್ಕೊಂಡ ಹೋಗ್ತೀವಿಖರೇ ಖರೇ ಹೆಣ್ಣಮಕ್ಕಳು ಉಳಿತಾಯ ಅನ್ನೂದು ಕಲೀಬೆಂದ್ರ ಅದು ನಮ್ಮ ಬ್ಯಾಚುಲರ್ ಗಂಡಮಕ್ಕಳಿಂದ.ಒಂದ ಉಳ್ಳಾಗಡ್ಡಿಸಣ್ಣ ಟೊಮೆಟೋ ತಗೊಂಡ ಚೂರ್ ಎಣ್ಣಿಹಾಕಿ ವಗ್ಗರಣೆ ಕೊಟ್ಟು ಒಂದ ಗ್ಲಾಸ್ ಅಕ್ಕಿ ಹಾಕಿ ಕುಕ್ಕರ್ ಒಳಗ ಮೂರಸಿಟಿ ಹೊಡ್ಸಿದ್ರ ಮುಗೀತುಪಂಚ ಪಕ್ವಾನ್ ಗಿಂತ ರುಚಿಯಾದ ಪಲಾವ್ ರೆಡಿಇದಿಲ್ಲ ಅಂದ್ರ ನಮ್ಮ ಹೊಟ್ಟಿ ತುಂಬ್ಸೂ ಇನ್ನೊಂದಅಡುಗಿ ಅಂದ್ರ ಉಪ್ಪಿಟ್ಟಹಿಂದಿನ ಜನ್ಮದೊಳಗ  ಉಳ್ಳಾಗಡ್ಡಿಟೊಮೆಟೋ ನಮ್ಮ ಮಕ್ಕಳಾಗಿ ಹುಟ್ಟಿರ್ಬೇಕ್ ಅನ್ನಿಸ್ತೈತಿಅದಕ್ಕ ಜನ್ಮದಾಗ ನಮಗ ಈಸಿಯಾಗಿ ಹೊಟ್ಟಿ ತುಂಬ್ಸಾತ್ಯಾವುಅವುಗಳ ಋಣ ಇಡೀ ಬ್ಯಾಚುಲರ್ ಹುಡ್ಗೂರ್ ಮ್ಯಾಲ್ ಎಷ್ಟ ಅದಪಾ ಅಂದ್ರನಮಗ ಇನ್ನೊಂದ ಜನ್ಮ ಅನ್ನೂದು ಏನರೆ ಇತ್ತಪಾ ಅಂದ್ರ ಉಳ್ಳಾಗಟ್ಟಿ ಮತ್ತ ಟೊಮೆಟೋ ಮಕ್ಕಳಾಗಿ ಹುಟ್ಟಿ ಅವುಗಳ ಋಣಾ ಒಂದಚೂರಾದ್ರು ಕಮ್ಮಿ ಮಾಡ್ಕೋಬೇಕು.
          ಒಂದ ಸಲಾ ಏನ್ ಆಗಿತ್ಪಾ ಅಂದ್ರ ನಮ್ಮ ಕಾಕಾ ಯಾವ್ದೋ ಕೆಲಸದ ಮ್ಯಾಲ ಸಿಟಿಗೆ ಬಂದಿದ್ದಹಂಗ ನನ್ನಮಾತಾಡ್ಸಕೊಂಡ ಹೊದ್ರ ಆತೂ ಅಂತ ಇನ್ನೂ ಟೈಮ್ ಇದ್ದದ್ರಿಂದ ಬೆಳಬೆಳಗ್ಗೆ ನಮ್ಮ ರೂಮಿ ಬಂದ ಬಿಟ್ಟಿದ್ದನಾ ಚಾ ಮಾಡಿಕೊಟ್ನಿಅದನ್ನ ಕುಡುದ ನಮ್ಮ ಕಾಕಾತಮ್ಮಾ ನೀ ಅಡುಗಿ ಚಲೋ ಮಾಡ್ತಿ ಅಂತಲಾ ಏನರೇ ಮಾಡ್ಪಾ ನಾನೂ ನಿನ್ನ ಕೈ ರುಚಿನೋಡ್ಬೇಕು ಅಂದಾಗನನಗ ಏನ್ ಮಾಡ್ಬೇಕಪಾ ಅಂದ ದಿಗಲ ಹಿಡೀತುನಾನರೆ ಮನಿಯೊಳಗ ನನಗ ದ್ವಾಸಿಪೂರಿಇಡ್ಲಿ,ಚಪಾತಿ ಎ-ಟೂ ಜಡ್ ಮಾಡಾಕ್ ಬರ್ತೈತಿ ಅಂದ ಮೊಬೈಲ್ ಪೋನ್ ಒಳಗ ಡೌಲ್ ಬ್ಯಾರೆ ತೊರ್ಸಿದ್ದೆಏನ್ ಮಾಡ್ಬೇಕಪಾ ಇವ್ರಿಗಿಅನ್ನೂದ್ರಾಗ ಫ್ರಿಜ್ ತಗೆದ ನೋಡಿದಾಗ ಗೊದಿ ಹಿಟ್ಟ ಇತ್ತು, ಬರಾಬರಾ ಚಪಾತಿ ಮಾಡಿಅವುನ್ನ ತೆವಿಮ್ಯಾಲ ಇಟ್ಟ ಬೆಯಿಸಿ ಕೊಟ್ರಆತೂ ಅನ್ನೂದ್ರಾಗಅದಕ್ ಏನರ ಚಟ್ನಿಯರೆಸಾಂಬರ ಏನಾದ್ರೂ ಮಾಡ್ಬೇಕಂಡ ಕಾಯಿಪಲ್ಲೆ ಕಡೆಗೆ ನೋಡ್ಬೇಕಾದ್ರ ಅಲ್ಲಿಒಂದೆರಡು ಹಸೀ ಟೊಮೊಟೋನಾಲ್ಕೈದು ಬಾಡಿದ್ದ ಹಸಿಮೆನಸಿನಕಾಯಿ ಇದ್ವುಮೊದಲ ಯಾವ್ದೂ ಪಸಂದ ಬರ್ಲಾರದ ಎಲ್ಲದಕ್ಕೂಹೆಸರ ಇಡೂ ಮನಸ್ಯಾ ಇಂವ, ಏನ್ ಮಾಡ್ಬೇಕಪಾ ಇವ್ರಿಗಿ ಅನ್ನೂದ್ರಾ ಎನೋ ತೆಲೀಗಿ ಹೊಳದಮನಸ್ಸಿನ್ಯಾಗ ಯೂರೇಕಾ ಅಂತಹೇಳಿ ಎರಡೂ ಟೊಮೆಟೊ ಉದ್ದುದ್ದ ಕತ್ತರಿಸಿ ಅದರೊಟ್ಟಿಗೆ ಹಸಿಮೆನಸಿನಕಾಯಿ ಸೇರಿ ತೆವಿಮ್ಯಾಲ ಹುರಿದು ಮಿಕ್ಸರ್ಬಾಂಡೆಯೊಳಗ ಹಾಕಿದೆಮೊದಲ ಹುರದ ಇಟ್ಟಿದ್ದ ಶೆಂಗಾ ಕಾಳುಬಾಡಿದ ಕೊತ್ತಂಬರಿ ಕಡ್ಡಿಚೂರ ಜೀರಿಗೆಅಜಿವಾನಅರಿಶಿಣಪುಡಿಬೇಕಾದಷ್ಟ ಉಪ್ಪಾ ಹಾಕಿಸಣ್ಣ ಗ್ಲಾಸ್ ಇಂದ ಅರ್ದಾ ಗ್ಲಾಸ್ ನೀರ ಹಾಕಿ ಮಿಕ್ಸರ್ ಒಳಗ ಹತ್ತ ಹನ್ನೆರಡ ಸಾರಿ  ಡರ್ ರ್ ರ್ಅನ್ನಿಸಿದೆನೋಡಾಕ್ ಚಂದಿತ್ತು ಗಡಬಡಿಯೊಳಗ ರುಚಿನೂ ನೋಡ್ಲಾರ್ದ ತಾಟೊಳಗ ಹಚ್ಚಿ ನಮ್ಮ ಕಾಕಾಗ ಕೊಟ್ಟೆಅದನ್ನ ತಿಂದನಮ್ಮಕಾಕಾ “ತಮ್ಮಾ ಮನಗಂಡ ಮಾಡಿಲೇಪಾ ಚಟ್ನಿದಿನಾಲೂ ನಿಮ್ಮ ಕಾಕೂನ ಅಡುಗಿ ತಿಂದ ತಿಂದ ಸಾಕಾಗಿತ್ತು ಇವಾಗಖರೇನ ಬಾಯಿ ಹಸನಾದಂಗ ಆತ ನೋಡ್ಪಾಖರೇನ ನಿನ್ನ ಕೈಯಾಗ ಸಾಕ್ಷಾತ್ ಅನ್ನಪೂರ್ಣಾದೇವಿ ವಸ್ತಿ ಮಾಡ್ಯಾಳುನಾಳಿಬರೂ ನಿನ್ನ ಹೆಂಡತಿ ಪುಣ್ಯಾ ಮಾಡ್ಯಾಳಪಾ” ಅಂತ ನನ್ನ ಹೊಗಳಿ ತಮ್ಮ ಕೆಲಸಕ್ಕ  ಹ್ವಾದ್ರುಆವಾಗ ನನಗ ಇಡೀ ಜಗತ್ ಗೆದ್ದಷ್ಟಖುಷಿ ಆಗಿತ್ತುಇದು ನನ್ನೊಬ್ಬನ ಗೆಲುವಲ್ಲ ಇಡೀ ಬ್ಯಾಚೂಲರ್ ಗಂಡ್ಮಕ್ಕಳ ಗೆಲುವೆಂದುದೇಶಾವರಿ ನಕ್ಕೂ ಮಿಸಿಮ್ಯಾಲ ಕೈಆಡಿಸಿಕೊಂಡೆ.