Saturday, October 12, 2019

ಟೈಮ್ ಅನ್ನೂದು ಪಾತರಗಿತ್ತಿ ಇದ್ಹಾಂಗ

ಟೈಮ್ ಅನ್ನೂದು ಪಾತರಗಿತ್ತಿ ಇದ್ಹಾಂಗ. ಯಾವ ವ್ಯಾಳೆದಾಗ ಏನ್ ಆಗ್ತದೋ ಹೇಳೂದ ಬಾಳ ಕಠಿಣ. ಅಂದಾಜು ಮಾಡಬಹುದಾದರೂ ಖರಾರುವಕ್ಕಾಗಿ, ಶಂಬರ್ ಟಕ್ಕೆ ಹಿಂಗ ಆಗ್ತದ ಅಂತ ಹೇಳಾಕ್ ಎಂಥವನಿಗೂ ಶಕ್ಯ ಆಗುದಿಲ್ಲಾ. ಜೀವನ ಅಂದ್ರ ಹಂಗ ಇರ್ಬೇಕ ಬಿಡ್ರಿ, ಇಲ್ಲಂದ್ರ ಲೈಫಿನೊಳಗ ಏನ ಸ್ವಾರಸ್ಯ ಇರ್ತದ? ನಾಳೆ ಕ್ರಿಕೆಟ್ ಒಳಗ ಯಾರ ವಿನ್ ಆಗ್ತಾರ, ಮುಂದಿನ ತಿಂಗಳ ಪರಿಕ್ಷೆಯೊಳಗ ನನ್ನ ಮಗಳು ಎಷ್ಟ ಮಾರ್ಕ್ಸ್ ತಗಿತಾಳ, ಮದುವಿ ಆದಮ್ಯಾಲ ಹೆಂಡತಿ ಡಿಲೆವರಿ ನಾರ್ಮಲಾಗ್ತನೋ ಇಲ್ಲ ಸಿಜೇರಿಯನ್ ಆಗ್ತದನೋ ಎಲ್ಲಾ ಇವಾಗ ಗೊತ್ತಾಗಿ ಬಿಟ್ರ ಲೈಪ್ ಅನ್ನೂದು ತಣ್ಣಗಿನ ಚಾ ಒಳಗ ಒಣಾ ಬ್ರೆಡ್ ತಿಂದಾಂಗ ಸಪ್ಪಗ ಇರ್ತದ. ಲೈಫ್ ಒಳಗ ಥ್ರಿಲ್ ಇರ್ಬೇಕಾದ್ರ ಬದುಕ ಅನ್ನೂದು ಮುಂದ ಏನ್ ಆಗ್ತದೋ ಅಂತ ಉಹಿಸಿಕೊಳ್ಳಲಾರದಂಗ ಸಸ್ಪೆನ್ಸ್ ಕೊಡ್ತಾ ಹೋಗ್ತಿರ್ಬೇಕು.
ಎರಡ ತಿಂಗಳ ಹಿಂದ ದಿಪಾವಳಿಗೆ ಊರಿಗೆ ಹೋಗಿದ್ದೆ. ಮನ್ಯಾಗ ಅವ್ವಾ “ನಿನ್ನ ವಾರಗಿ ಹುಡುಗೂರು ಎರೆಡೆರಡ ಹಡದಾರು ನಿನಗೂ ಲಗೂನ ಲಗ್ನ ಮಾಡ್ಬೇಕು, ಇಲ್ಲಂದ್ರ ನಿನ್ನ ಮದುವಿಗೆ ಅವ್ರು ತಮ್ಮ ಮಕ್ಕಳನ ಒಡ್ಯಾಡಾಕ ಕಳಸ್ತಾರು” ಅಂತ ಅಂಜಿಕಿ ಹಾಕಿದ್ರು, ಆದ್ರ ನಾ “ಹೇ ಈಗೇನ ಅರ್ಜೆಂಟ್ ಐತಿ ತಗೋರಿ ಉಗಾದಿ ಸುತ್ತ ನೋಡಿದ್ರಾತು” ಅಂತ ಅಂದಾಗ “ಇವಾಗ ನೋಡಾಕ ಸುರು ಮಾಡಿದ್ರ ಉಗಾದಿಗಿ ಹೋಗಿ ಹತ್ತೈತಿ, ನಾ ಅರವತ್ತನಾಲ್ಕ ಹೆಣ್ಣ ನೋಡೇನಿಪಾ” ಅಂತ ದೊಸ್ತೊಬ್ಬ ದಣಿಗೂಡಿಸಿದಾ. ಇಷ್ಟ ದಿವಸ ಮದುವಿ ಆಗ್ಬೇಕು ಅಂತ ಆಸೆ ಇತ್ತಾದ್ರು ಹಿಂತಾ ಹುಡುಗಿನ ಬೇಕು, ಇಷ್ಟ ಟೈಮೊಳಗ ಮದುವಿ ಆಗಬೇಕು ಅಂತ ಏನೂ ಕಲ್ಪನಾ ಇರಲಿಲ್ಲ, ಮನ್ಯಾವ್ರ ಒತ್ತಡನಾ ಇರಲಿಲ್ಲ. ಇವಾಗ ಅವ್ರಾಗೆ ನೆನಪ ತಗದಾರ ಬಾ, ಒಂದ ಕೈ ನೋಡೇ ಬಿಡೂನು ಅಂತೇಳಿ, ಗಟ್ಟಿ ಜಿಂವಾ ಮಾಡಿ ನಾಚ್ಕೊಂತ ಯೆಸ್ ಅಂದ ಬಿಟ್ಟೆ. ನಾ ಯೆಸ್ ಅನ್ನೂದ ತಡಾ ನಮ್ಮವ್ವ ನಾಲ್ಕೈದು ಹೆಣ್ಣ ರಡಿ ಮಾಡ್ಕೊಂದ ಕುಂತಿದ್ಲು, ಹರ್ಯಾಗೊಂದು ಸಂಜಿಕೊಂದು ಅಂತೇಳಿ ಎರಡ ದಿನದಾಗ ನಾಲ್ಕ ಹೆಣ್ಣ ನೋಡೇ ಬಿಟ್ವಿ. ಎಲ್ಲಾರ ಮನ್ಯಾಗೂ ಅವಲಕ್ಕಿ ಮಸ್ತ ಮಾಡಿದ್ರ ಖರೇ ಯಾಕೋ ನಮಗ ಹೊಟ್ಟಿ ತುಂಬಿದಾಂಗ ಕಣ್ಣ ತುಂಬ್ಲಿಲ್ಲ. “ತಮ್ಮಾ ಹುಡಗ್ಯಾರ ಹೆಂಗ ಅದಾವೋ” ಅಂತ ಕೇಳಿದಾಗ “ಚಲೋ ಅದಾವು” ಅಂತ ನನ್ನ ಬಾಯಾಗ ಬರೂ ತಡಾ ಇಲ್ಲದ, ಮತ್ತ ನೋಡೂನಳಪಾ ಅಂತ ಉತ್ತರ ನಮ್ಮ ಮೆನೆವ್ರನ ಹೇಳ್ತಿದ್ರು. ನಾ ಎಲ್ಲಿ ಬಾಳ ಮಾತಾಡಿದ್ರ “ಏನ್ ಬರಗೆಟ್ಟಾನಿಂವ” ಅಂತ ನಿಮಿತಿ ಬರ್ತಾವಂತ ಸುಮ್ಮ ಆದೆ. ರಜೆ ಮುಗ್ಯಾಕ್ ಬಂತು ಯಾವ್ದು ಹುಡುಗಿ ಸೆಟ್ಟ ಆಗ್ಲಿಲ್ಲ. ನಾ ಎಲ್ಲಿ ನಮ್ಮ ದೋಸ್ತ ಹೇಳಿದಾಂಗ 60-70 ಹೆಣ್ಣ ನೋಡೂದಾಗ್ತೈತಿ ಅಂತ ಅಂಜಿಕಿ ಸುರು ಆತು. ಹೇಳಿ ಕೇಳಿ ನನಗ ಮೊದಲ ಅವಲಕ್ಕಿ ಅಂದ್ರ ಆಗಿ ಬರಾಂಗಿಲ್ಲ. ಉತ್ತರ ಕರ್ನಾಟಕದ ಕಡೆಗೆ ಹೆಣ್ಣ ನೋಡಾಕ್ ಹ್ವಾದ್ರ ಪೌನ್ಯಾರ್ಗಿ ಅವಲಕ್ಕಿ ಅಫಿಸಿಯಲ್ ಫುಡ್ ಬ್ಯಾರೆ.
ಹಂಗೂ ಹಿಂಗೂ ಹುಡುಗ್ಯಾರ ಮನಸ್ಸಿಗಿ ಬರ್ಲಿಲ್ಲ, ಮನ್ಯಾಗ ಸುಮ್ಮಸುಮ್ಮಕ ಆಶೆ ಹುಟ್ಟಿಸಿದ್ರ ಅಂತ ಬೇಜಾರಾಗಿ ಮಂಗಳೂರು ಬಸ್ ಹತ್ತಿದೆ. ಐದಾರು ಕಿಲೋಮಿಟರ್ ಹೋಗಿದ್ದಿಲ್ಲ ಪರಿಚಯದ ಡಾಕ್ಟರ್ ಒಬ್ಬರ ಕಡೆಯಿಂದ ಪೋನ್ ‘ತಮ್ಮ ಊರಿಗಿ ಬಂದಿದ್ದಂತ, ನಮ್ಮ ಪರಿಚಯದಾಗ ಒಂದ ಹೆಣ್ಣ ಐತಪಾ, ಬೆಳ್ಳಗ ಕೊಳಿ ತತ್ತಿ ಇದ್ದಾಂಗ ಅದಾಳ ಹುಡುಗಿ, ಸಾಲಿನೂ ಚಲೋ ಕಲ್ತಾಳ, ಗರೀಬ ಮಂದಿ ನೋಡ್ತಿಏನ್ ಮತ್ತ” ಅಂದ್ರು. ಮೊದಲ ನಾಲ್ಕ ಹೆಣ್ಣ ನೋಡಿ ಹೈರಾಣ ಆಗಿದ್ದ ನಾ ಮತ್ತ ವಾಪಸ್ಸ ಹೋಗಿ ನೋಡಿ ಇಷ್ಟ ಆಗ್ಲಿಲ್ಲಂದ್ರ ಬಸ್ ಚಾರ್ಜ ದಂಡ ಅಂತ ಹೇಳಿ “ವಾಟ್ಸಾಪ್ ಗೆ ಪೋಟೊ, ಬಯೊಡೆಟಾ ಕಳಸ್ರಿ ನೋಡೂನು” ಅಂತ ಹೇಳಿ ಪೋನ್ ಕಟ್ಟ ಮಾಡಿದೆ. ಐದ ನಿಮಿಷದೊಳಗ ಪೋಟೊ ಬಂತು ಹುಡುಗಿ ಚಲೋ ಇದ್ದಾಳ, ಬಯೊಡಾಟಾನೂ ಪಾಡ ಅದ ಅಂತೇಳಿ ನಮ್ಮವ್ವಗ ಪೋನ್ ಮಾಡಿದೆ. “ನೋಡ ಮಮ್ಮಿ, ಅಥಣಿಯೊಳಗ ಒಂದ ಹೆಣ್ಣ ಅದ ಅಂತ ಡಾಕ್ಟರ್ ಸಾಹೆಬ್ರ ಹೇಳ್ಯಾರು ಮೊದಲ ನೀವ ನೋಡ್ಕಂಬರಿ ಅಂದೆ. ಕೇಳಿ ಎರಡ ದಿವಸಾಗಿತ್ತ ನೋಡ್ಕೊಂಡ ಬಂದು ಪೋನ್ ಮಾಡಿದ್ರು “ಹುಡುಗಿ ಬೇಷ್ ಅದಾಳಪಾ, ಮನಿತಾನೂ ಅಡ್ಡಿಯಿಲ್ಲ ನಮಗೆಲ್ಲಾ ಇಷ್ಟ ಆಗೇತಿ ನೀ ನೋಡಿ ಪಸಂದ ಬಂತದ್ರ ಮುಂದಿಂದ ಮಾತಾಡೂನು” ಅಂದಾಗ ನನಗ ಅರ್ದ ಮದುವಿ ಆದಾಂಗ ಅನ್ನಿಸಿತು. ಯಾಕಂದ್ರ ನಮ್ಮವ್ವ ನನಗಿಂತ ಹೆಚ್ಚ ಸೌಂದರ್ಯ ಪ್ರಜ್ಞೆ ಹೊಂದ್ಯಾಳ, ತನ್ನ ಮಗಾ ನೋಡಾಕ ಜೊಕಮಾರ ತರಾಇದ್ರನೂ ರಾಜಕುಮಾರಿಗತೇ ಹುಡುಗಿನ ಬೇಕ ಅನ್ನುವಾಕಿ ಆ ಮಾತ ಬ್ಯಾರೆ ಆದ್ರ ಅಕಿ ಇಷ್ಟಪಟ್ಟಾಳಂದ್ರ ನಾ ನಿಮಿತ್ತ ಮಾತ್ರ ಬರೂದಂತ ಹೇಳಿ ಮರುದಿನಾ ಬಂದಬಿಟ್ಟೆ. ಮುಂದ ಒಂದ ವಾರದೊಳಗ ಗಟ್ಟಿ ಆತು. ದಿನಾಂಕ 15-11-2017 ರಂದು ಸಕ್ಕರಿ ಹಾಕಿದ್ದ ಸಜ್ಜಕಾ (ಕೆಸರಿ ಬಾತ್) ತಿನ್ನಕೊಂತ ಮಗದುಮ್ಮ ಮನೆತನದ ಜೇಷ್ಠ ಹಾಗೂ ಏಕೈಕ ಸುಪುತ್ರನಾದ ಚಿರಂಜಿವಿ ಶ್ರೀಶೈಲನಿಗೂ ತೋಡಕರ್ ಕುಟುಂಬದ ಜೇಷ್ಠ ಸುಪುತ್ರಿ ಚಿರಂಜಿವಿ ಕುಂಕುಮ ಸೌಭಾಗ್ಯವತಿ ರಾಜೇಶ್ವರಿಗೂ ( Rajeshwari ) ಹಿರಿಯರು ನಿಶ್ಚಯಿಸಿದ ದಿನಾಂಕದಂದು ಮದುವಿ ಮಾಡ್ಕೊಂಡ ಗುದುಮುರಿಗಿ ಬಿಳ್ರಿ ಅಂತ ಎಲ್ಲ ಗುರು ಹಿರಿಯರು, ಬಂದುಗಳು, ಪರಿವಾರದವ್ರು ಆಶಿರ್ವಾದ ಸಮೇತ ಮದುವಿ ನಿಶ್ಚಯ ಮಾಡೇ ಬಿಟ್ಟು.
ಇದ್ಯಾವ್ದು ಮುಗಿನಮ್ಯಾಲ ಬೆರಳ ಇಟ್ಕೊಳ್ಳುವ ವಿಷಯನ ಅಲ್ಲ. “ಅಲ್ಲ ನಾ ಒಂದ ಮೊಬೈಲ್ ಕವರ್ ತಗೊಳ್ಳಾಕ ಹತ್ತಿಪ್ಪತ್ತ ಅಂಗಡಿ ಅಡ್ಯಾಡಿ ಒಂದ ವಾರ ಯೋಚನೆ ಮಾಡಿ ತಗೊಳ್ಳು ಮನಸ್ಯಾ ಇಡೀ ಜೀವನದ ಜೊತೆ ಇರುವ ಹೆಂಡತಿಯನ್ನ ಒಂದ ವಾರದೊಳಗ ಯಾವ್ದು ವಿಚಾರ ಮಾಡಲಾರದ ಹೂ ಅನ್ನಲೆಪಾ ಅಂತ ಅನ್ನಸಾಕ ಸುರು ಆತು. ಮದುವಿ ಆಗಾಕೂ ಯಾವ ಆತುರ ಇರಲಿಲ್ಲ ಆದ್ರ “ಹುಡುಗಿ ಚಂದ ಅದಾಳು, ಚಲೋ ಸಾಲಿ ಕಲ್ತಾಳು, ಸರಕಾರಿ ನೌಕರಿಯೊಳಗ ಅದಾಳು, ಚಲೋ ಮನೆತನ” ಅನ್ನೂ ಈ ಯಾವ ಮಾತೂ ಬಿಡಿಯಾಗಿ-ಇಡಿಯಾಗಿ ಕೊಟ್ಟರೂ ಉತ್ತರ ಸಮಾದಾನ ಕೊಡ್ಲಿಲ್ಲ. ನಂತರ ನಾನ ಯಾವ ಟೈಮೊಳಗ ಏನ್ ಇಷ್ಟ ಆಗ್ತೈತಿ ಅಂತ ಹೇಳಾಕ್ ಬರೂದಿಲ್ಲ. ಗಾಂಧೀಜಿ ದಕ್ಷಿಣ ಆಪ್ರಿಕಾದಲ್ಲಿದ್ದಾಗ ಒಂದಿನ ರೈಲು ಪ್ರಯಾಣ ಮಾಡುವಾಗ ರಸ್ಕಿನ್ ಬರೆದ “ಅನ್ ಟು ದಿ ಲಾಸ್ಟ್’ ಕೃತಿಯನ್ನು ಓದುತ್ತಾರಂತ. ಅದು ಅವರ ಬದುಕಿನ ದಿಕ್ಕನ್ನೇ ಬದಲಿಸಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕುವಂತೆ ಪ್ರೇರಣೆ ಕೊಟ್ಟಿತಂತ. ಅದಕ್ಕಿಂತ ಮುಂಚೆ, ಅದರ ನಂತರ ಆ ಪುಸ್ತಕವನ್ನು ಲಕ್ಷಾಂತರ ಮಂದಿ ಓದ್ಯಾರ ಆದ್ರ ಯಾರಿಗೂ ಆ ತರ ಪ್ರಭಾವ ಬಿರೀದ್ದ ಇರ್ಲಿಕ್ಕಿಲ್ಲ. ಅದಕ್ಕ ಯಾವ ಪುಸ್ತಕ, ಒಂದು ನೋಟ, ಚುಟುಕು ಮಾತು, ಒಂದು ಪ್ರೀತಿಯ ಹಾರೈಕೆ, ಸಣ್ಣ ಬೈಗುಳ ಯಾವ ಸಮಯದಲ್ಲಿ ಯಾರ ಮೇಲೆ ಹ್ಯಾಂಗ ಪ್ರಭಾವ ಬೀರತೈತಿ ಅಂತ ಹೇಳಿಲಿಕ್ಕೆ ಅಸಾದ್ಯ. ಯಾಕಂತ ಗೊತ್ತಾಗೂದು ಬ್ಯಾಡ ಬಿಡ್ರಿ. ಗುರು ಮೂಲ, ನದಿ ಮೂಲ, ಪ್ರೀತಿ ಮೂಲ ಹುಡುಕಬಾರದಂತ ಒಂದ ವೇಳೆ ಅದರ ಮೂಲ ಗೊತ್ತಾದ್ರ ಅಲ್ಲೇನೂ ಸ್ವಾರಸ್ಯ ಇರೂದಿಲ್ಲ, ಮೂಲ ಸಿಕ್ಕ ಇಷ್ಟನ? ಅಂತ ಮನಸ್ಸ ಅತೃಪ್ತಾಗಿ ಒಂತರಾ ಉಡಾಪೆ ಆಗಿ ಬಿಡ್ತೈತಿ.
“ನಾ ನಿಮಗ ಇಷ್ಟ ಆಗೇನ್ರಿ?” ಅಕಿ ನನ್ನೊಟ್ಟಿ ಆಡಿದ ಮೊದಲ ಮಾತು. ಇವತ್ತಿಗೂ ನೆನಪಾದ್ರು ಕಿಂವ್ಯಾಗ ಗುಂಗಿ ಹುಳದಾಂಗ ಗುಂಯ್ ಗುಟ್ಟತಿರ್ತದ. ಆ ಒಂದು ವಾಕ್ಯ “ಮದುವಿ ಆದ್ರ ಇಕಿನ ಆಗ್ಬೇಕು” ಅಂತ ಡಿಸೈಡ್ ಮಾಡುವಂಗ ಮಾಡಿತ್ತು ಅಷ್ಟ ಮುಗ್ದವಾಗಿತ್ತು ಆ ಮಾತು. ಅಂದಿನಿಂದ ಅಂದಿನಿಂದ ಇಂದಿನ ತನಕ ನನ್ನ ದಿನದ ಭಾಗ ಇಕೆ. ಮಾತು, ಹರಟಿ, ಸಂತೋಷ, ನೋವು, ಹಾಡು, ಚರ್ಚೆ, ಸಂವಾದ, ಕುಟುಂಬ ಒಟ್ಟಿನ್ಯಾಗ ನನ್ನ ದಿನಚರಿಯ ಕೊನೆಯ ಸಾಲಿನ ತನಕ ಈಕಿ ಪಾಲ ಪಡ್ದಾಳು. ಎಲ್ಲಾ ಬಿಟ್ಟ ಈ ಜೋಡಿನ ಮಾತಾಡ್ಕೊಂತ ಕುಂತಿರ್ತಾನ ಅನ್ಬಾಡ್ರಿ ಮತ್ತ, ಬ್ಯಾರೆ ಕೆಲಸಾನೂ ಮಾಡ್ತೀನ್ರಪಾ.
ಹೊಸಾ ಜೋಡಿ ಹಿಂಗ ನಕ್ಕೊತ ಇರ್ತಿ ಅಂತ ಆಶಿರ್ವಾದ ಮಾಡಿಬಿಡ್ರಿ ನೋಡೂನು.

No comments:

Post a Comment